ಎರ್ನಾಕುಳಂ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೇರಳಕ್ಕೆ 3 ಲಕ್ಷ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಯನ್ನು ಘೋಷಿಸಿದ್ದಾರೆ.
ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಘೋಷಿಸಲಾಗಿದೆ. ಇನ್ವೆಸ್ಟ್ ಕೇರಳ ಗ್ಲೋಬಲ್ ಶೃಂಗಸಭೆಯಲ್ಲಿ ಆನ್‍ಲೈನ್‍ನಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ ಈ ಘೋಷಣೆ ಮಾಡಿದರು.
ವಿದೇಶಗಳಿಂದಲೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಕೇರಳಕ್ಕೆ ಬರುತ್ತಿದ್ದಾರೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಕೇರಳ ಪ್ರವಾಸೋದ್ಯಮವನ್ನು ಸುಧಾರಿಸಬೇಕಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕೇರಳದಲ್ಲಿ ಹಣ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ದೃಢ ಬೆಂಬಲ ನೀಡಲಿದೆ ಎಂದು ನಿತಿನ್ ಗಡ್ಕರಿ ಭರವಸೆ ನೀಡಿದರು.
896 ಕಿಲೋಮೀಟರ್ ಉದ್ದದ 31 ಹೊಸ ಯೋಜನೆಗಳಿವೆ. ಕೇರಳ ಒಂದರಲ್ಲೇ ರಸ್ತೆ ಅಭಿವೃದ್ಧಿಗೆ 50,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತಿದೆ. ಪಾಲಕ್ಕಾಡ್-ಮಲಪ್ಪುರಂ ರಸ್ತೆಗೆ 10,000 ಕೋಟಿ ಮತ್ತು ಅಂಗಮಾಲಿ ಬೈಪಾಸ್‍ಗೆ 6,000 ಕೋಟಿ ಮೀಸಲಿಡಲಾಗುವುದು.
ತಿರುವನಂತಪುರಂ ಹೊರ ವರ್ತುಲ ರಸ್ತೆಯ ಅಭಿವೃದ್ಧಿಗೆ 5,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಅಂಗಮಾಲಿಯಿಂದ ಕುಂದನ್ನೂರುವರೆಗಿನ ರಾಷ್ಟ್ರೀಯ ಹೆದ್ದಾರಿ 544 ರಲ್ಲಿನ ಎರ್ನಾಕುಳಂ ಬೈಪಾಸ್ ಅನ್ನು ಆರು ಪಥಗಳ ರಸ್ತೆಯಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಸಚಿವರು ಘೋಷಿಸಿದರು.






