ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಸಿದ್ಧತಾಕಾರ್ಯಗಳು ಭರದಿಂದ ಸಾಗುತ್ತಿದ್ದು, ನೂರಾರು ಮಂದಿ ಸ್ವಯಂಸೇವಕರು ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇವಾಲಯದಲ್ಲಿ ನಡೆಯುವ ಸಿದ್ಧತಾ ಕಾರ್ಯಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಗುರುವಾರ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ದೇವಸ್ಥಾನದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಸ್ವಯಂಸೇವಕರೊಂದಿಗೆ ಬೆರೆತು, ಅವರೊಂದಿಗೆ ತನ್ನನ್ನೂ ಕೆಲಸದಲ್ಲಿ ತೊಡಗಿಸಿಕೊಂಡರು. ಪ್ರತಿದಿನ ದೇವಾಲಯದಲ್ಲಿ 40ರಿಂದ 60ಷ್ಟು ಮಂದಿ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಪರಿಸರ ಶುಚೀಕರಣ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ಶುಚೀಕರಿಸಲು ಬೇಕಾದ ಪೊರಕೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಪೊರಕೆ ತಯಾರಿಯ ಗುರಿಯಿರಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ತೆಂಗಿನಗರಿ ಲಭ್ಯವಾಗದಿರುವುದರಿಂದ ಭಕ್ತಾದಿಗಳು ತಮ್ಮ ಮನೆಗಳಲ್ಲಿ ಪೊರಕೆ ತಯಾರಿಸಿ ದೇವಸ್ಥಾನಕ್ಕೆ ಒಪ್ಪಿಸುವಂತೆಯೂ ಸೂಚಿಸಲಾಗಿದೆ. ಮಧೂರು ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಗೆ ಒಂದು ತಿಂಗಳು 25ದಿವಸ ಬಾಕಿ ಉಳಿದಿದ್ದು, ನವೀಕರಣಕಾರ್ಯಗಳು ಭರದಿಂದ ಸಾಗುತ್ತಿದೆ.
ಕಾರ್ಯಕ್ರಮದ ಯಶಸ್ವಿಗಾಗಿ ಸಮಿತಿ:
ಮಧೂರು ಕ್ಷೇತ್ರ ಬ್ರಹ್ಮಕಲಶ ಹಾಗೂ ಮೂಡಪ್ಪಸೇವೆಯ ಯಶಸ್ಸಿಗಾಗಿ ಸಮಿತಿ ರಚನಾ ಸಭೆ ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರದಲ್ಲಿ ಜರುಗಿತು. ದಾಮೋದರ ಅಮ್ಮಂಗೋಡ್ ಅಧ್ಯಕ್ಷತೆ ವಹಿಸಿದ್ದರು. ರಾಜನ್ ಮುಳಿಯಾರು ಬ್ರಹ್ಮಕಲಶೋತ್ಸವದ ಬಗ್ಗೆ ಹಾಗೂ ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯಲ್ಲಿ ವಿನಂತಿ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿ ಪದಾಧಿಕಾರಿಗಳಿಗೆ ಹಸ್ತಾ0ತರಿಸಲಾಯಿತು. ತುಳಸಿ ಅಮ್ಮಂಗೋಡು ಸ್ವಾಗತಿಸಿದರು. ಜನಾರ್ದನನ್ ವಂದಿಸಿದರು.






