ಮೇಲ್ಬೋರ್ನ್: ಆಸ್ಟ್ರೇಲಿಯಾದ ವಾಯವ್ಯ ಪ್ರಾಂತ್ಯದ ತಾಸ್‌ಮಾನಿಯಾ (Tasmania) ರಾಜ್ಯದ ಅರ್ಥೂರ್ ನದಿ ಸಮುದ್ರ ಸೇರುವ ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ದಡಕ್ಕೆ ಬಿದ್ದಿವೆ.
150 ತಿಮಿಂಗಿಲಗಳಲ್ಲಿ 136 ತಿಮಿಂಗಿಲ ಇನ್ನೂ ಬದುಕಿವೆ. ಉಳಿದವು ಸತ್ತಿವೆ.
ಬದುಕಿರುವಲ್ಲಿ ಕೆಲವು ಸಾವು-ಬದುಕಿನ ಮಧ್ಯ ಹೋರಾಡುತ್ತಿವೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವಾಲಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಚ್ಚರಿ ಎನ್ನುವಂತೆ ದೊಡ್ಡ ಪ್ರಮಾಣದಲ್ಲಿ ತಿಮಿಂಗಿಲಗಳು ಕಡಲ ತೀರಕ್ಕೆ ಬಂದು ಬಿದ್ದಿರುವುದನ್ನು ಸ್ಥಳೀಯ ಮೀನುಗಾರರು ಗುರುತಿಸಿ ಅಧಿಕಾರಿಗಳಿಗೆ ತಿಳಿಸಿದ್ದರು.
ಆದರೆ, ಈ ಪ್ರದೇಶಕ್ಕೆ ಪರಿಹಾರ ಕಾರ್ಯಾಚರಣೆ ತಂಡ ತೆರಳುವುದಕ್ಕೆ ಭಾರಿ ಸಮಸ್ಯೆ ಇದೆ. ಇದೊಂದು ಜನವಸತಿ ಹಾಗೂ ಸಾರಿಗೆ ಸಂಪರ್ಕಗಳು ಇಲ್ಲದಿರುವ ಪ್ರದೇಶ ಎಂದು ಹೇಳಿದ್ದಾರೆ.
ಅದಾಗ್ಯೂ ಕೆಲವು ಮರಿ ತಿಮಿಂಗಿಲಗಳನ್ನು ಆಳ ಸಮುದ್ರಕ್ಕೆ ತಳ್ಳುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ತಿಮಿಂಗಿಲಗಳು ಸಮುದ್ರದ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ. ಆಳ ಸಮುದ್ರದಲ್ಲಿ ಯಾವುದೋ ದೊಡ್ಡ ಶಬ್ದ, ಶತ್ರುಗಳ ದಾಳಿ, ಹವಾಮಾನ ವೈಪರಿತ್ಯ ಅಥವಾ ಅನಾರೋಗ್ಯದಿಂದ ಬಂದು ಬಿದ್ದಿರಬಹುದು ಎಂದು ವರದಿ ತಿಳಿಸಿದೆ.
ದಾಖಲೆಗಳ ಪ್ರಕಾರ ಈ ಹಿಂದೆ ಎರಡು ಬಾರಿ ಆಸ್ಟ್ರೇಲಿಯಾದ ಬೇರೆ ಬೇರೆ ಕಡಲ ತೀರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ತಿಮಿಂಗಿಲಗಳು ಬಂದು ಬಿದ್ದಿದ್ದವು.

