ಢಾಕಾ: 'ನಾನು ವಾಪಸ್ ಬಾಂಗ್ಲಾದೇಶಕ್ಕೆ ಬರುತ್ತೇನೆ. ನಮ್ಮ ಪೊಲೀಸರನ್ನು ಬಲಿ ತೆಗೆದುಕೊಂಡಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇನೆ' ಎಂದು ಭಾರತದಲ್ಲಿ ರಕ್ಷಣೆ ಪಡೆಯುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಹುದ್ದೆಗಳಲ್ಲಿ ನೀಡುವ ಮೀಸಲಾತಿ ವಿಚಾರವಾಗಿ ವಿದ್ಯಾರ್ಥಿಗಳು ಕಳೆದ ವರ್ಷ ದೊಡ್ಡ ಮಟ್ಟದ ಚಳವಳಿ ನಡೆಸಿದ್ದರು.
ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಪೊಲೀಸರು ಮೃತಪಟ್ಟಿದ್ದ ನಾಲ್ವರು ಪೊಲೀಸರ ಪತ್ನಿಯರ ಜೊತೆ ಜೂಮ್ ಮೀಟಿಂಗ್‌ನಲ್ಲಿ ಮಾತನಾಡಿದ ಹಸೀನಾ ಅವರು ದೇಶಕ್ಕೆ ಮರಳುವುದಾಗಿ ಹೇಳಿದ್ದಾರೆ.
ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧವೂ ಹರಿಹಾಯ್ದಿರುವ ಹಸೀನಾ, 'ಅವರು (ಯೂನಸ್) ದೇಶವನ್ನು ನಾಶ ಮಾಡಿದ್ದಾರೆ. 'ಭಯೋತ್ಪದಾಕರ' ಕೈಯಲ್ಲಿ ಸರ್ಕಾರ ನೀಡಿದ್ದಾರೆ. ಯೂನುಸ್ ಒಬ್ಬ ದಂಗೆಕೋರ. ನಾನು ವಾಪಸು ಬರುತ್ತೇನೆ. ಭಯೋತ್ಪಾದಕರು ತುಂಬಿರುವ ಈ ಸರ್ಕಾರವನ್ನು ಉರುಳಿಸುತ್ತೇನೆ' ಎಂದರು.
'ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಪ್ರಕರಣದ ಸಂಬಂಧ ರೂಪಿಸಲಾಗಿದ್ದ ಎಲ್ಲ ತನಿಖಾ ಸಮಿತಿಗಳನ್ನು ಯೂನುಸ್ ಸರ್ಕಾರ ರದ್ದು ಮಾಡಿದೆ. ನಾನು ದೇಶದ ಬಿಡುವ ಸಂದರ್ಭದಲ್ಲಿ ನನ್ನ ಹತ್ಯೆಗೆ ಸಂಚು ನಡೆದಿತ್ತು. ದೇವರ ದಯೆ, ನಾನು ಬದುಕಿದ್ದೇನೆ' ಎಂದರು.
'ತಮ್ಮ ಅವಾಮಿ ಪಕ್ಷದ ಕಾರ್ಯಕರ್ತರೊಂದಿಗೆ ಹಸೀನಾ ಅವರು ನಿರಂತರವಾಗಿ ಆನ್‌ಲೈನ್ ಮೀಟಿಂಗ್‌ಗಳ ಮೂಲಕ ಸಂಪರ್ಕದಲ್ಲಿ ಇರುತ್ತಾರೆ' ಎಂದು 'ದಿ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
'ವಾಪಸು ಕರೆಸಿಕೊಳ್ಳುತ್ತೇವೆ' ಹಸೀನಾ ಅವರ ಹೇಳಿಕೆಗೆ ಮಧ್ಯಂತರ ಸರ್ಕಾರ ಪ್ರತಿಕ್ರಿಯಿಸಿದ್ದು 'ಹಸೀನಾ ಅವರನ್ನು ವಾಪಸು ದೇಶಕ್ಕೆ ಕರೆಸಿಕೊಳ್ಳುವುದು ಮತ್ತು ಅವರ ಆಡಳಿತ ಅವಧಿಯಲ್ಲಿ ನಡೆದ ಎಲ್ಲ ಅಪರಾಧಗಳ ಬಗ್ಗೆಯೂ ವಿಚಾರಣೆ ನಡೆಸಿ ಹೊಣೆಗಾರರನ್ನಾಗಿಸಲಾಗುವುದು' ಎಂದು ಮಧ್ಯಂತರ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಅಲಾಂ ಅವರು ಹೇಳಿದ್ದಾರೆ. 'ಅವಾಮಿ ಲೀಗ್ ಪಕ್ಷವು ದೇಶದ ರಾಜಕಾರಣದಲ್ಲಿ ಉಳಿಯಬೇಕೇ ಬೇಡವೇ ಎನ್ನುವ ಬಗ್ಗೆ ಇಲ್ಲಿನ ಜನರು ಮತ್ತು ಇತರೆ ಪಕ್ಷಗಳು ನಿರ್ಧಾರ ಮಾಡುತ್ತಾರೆ. ಹತ್ಯೆಗಳಿಗೆ ದೇಶದ ಜನರು ಕಣ್ಮರೆಯಾದ ಪ್ರಕರಣಗಳಲ್ಲಿ ಭಾಗಿಯಾದವರು ವಿಚಾರಣೆಯನ್ನು ಎದುರಿಸಲೇಬೇಕು' ಎಂದಿದ್ದಾರೆ.




