ನವದೆಹಲಿ: ಈ ವರ್ಷದ ಜನವರಿ ತಿಂಗಳು ವಿಶ್ವವು ಕಂಡ ಅತ್ಯಂತ ಹೆಚ್ಚು ತಾಪಮಾನದ 'ಜನವರಿ ತಿಂಗಳು' ಎಂದು ಯುರೋಪಿನ ಹವಾಮಾನ ಏಜೆನ್ಸಿ ಹೇಳಿದೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ 'ಲಾ ನಿನಾ' ಪರಿಣಾಮ ಇದ್ದರೂ ಜನವರಿ ತಿಂಗಳಲ್ಲಿ ತಾಪಮಾನ ಹೆಚ್ಚಾಗಿತ್ತು ಎಂದು ಏಜೆನ್ಸಿಯು ಹೇಳಿದೆ.
2024ರಲ್ಲಿ ಜಗತ್ತು ಇದುವರೆಗೆ ದಾಖಲಾಗಿರುವ ಅತ್ಯಂತ ಹೆಚ್ಚಿನ ತಾಪಮಾನದ ವರ್ಷವನ್ನು ಕಂಡಿತ್ತು. ಅಲ್ಲದೆ, ಕೈಗಾರಿಕಾ ಯುಗಕ್ಕೆ ಮೊದಲಿನ ತಾಪಮಾನಕ್ಕಿಂತ 1.75 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ಸರಾಸರಿ ತಾಪಮಾನವನ್ನು 2024ರಲ್ಲಿ ಅನುಭವಿಸಿತ್ತು.
ಯುರೋಪಿನ ಹವಾಮಾನ ಏಜೆನ್ಸಿಯಾದ 'ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್' ನೀಡಿರುವ ಮಾಹಿತಿ ಪ್ರಕಾರ ಈ ವರ್ಷದ ಜನವರಿ ತಿಂಗಳಲ್ಲಿ ದಾಖಲಾಗಿರುವ ಜಾಗತಿಕ ಸರಾಸರಿ ತಾಪಮಾನವು 13.23 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಅಲ್ಲಿಯವರೆಗಿನ ಅತ್ಯಂತ ಹೆಚ್ಚಿನ ತಾಪಮಾನದ ಜನವರಿ ತಿಂಗಳಾದ 2024ರ ಜನವರಿಯ ಸರಾಸರಿ ತಾಪಮಾನಕ್ಕಿಂತ 0.09 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು.
'ಲಾ ನಿನಾ ಸ್ಥಿತಿ ನಿರ್ಮಾಣ ಆಗಿದ್ದರೂ ಜನವರಿಯಲ್ಲಿ ದಾಖಲೆ ಮಟ್ಟದ ತಾಪಮಾನ ಕಂಡುಬಂದಿದೆ' ಎಂದು ಏಜೆನ್ಸಿಯ ಉಪ ನಿರ್ದೇಶಕಿ ಸಮಂತಾ ಬರ್ಗಸ್ ಹೇಳಿದ್ದಾರೆ.






