ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿ ಅಭಿವೃದ್ಧಿಹೆಸರಲ್ಲಿ ರೆಂಬೆ ಕಟಾವುಗೊಳಿಸಿದ ಬೃಹತ್ ಮರ ಹೂವಿನ ಕುಂಡಗಳಿಗೆ ಆಸರೆಯಾಗುವ ಮೂಲಕ ಜನರ ಗಮನಸೆಳೆಯುತ್ತಿದೆ. ಹಲವು ವರ್ಷಗಳ ಪುರಾತನವಾದ ಮಾವಿನ ಮರದ ರೆಂಬೆಗಳನ್ನು ಸಂಪೂರ್ಣ ಕಡಿದು ಕಾಂಡ ಮಾತ್ರ ಉಳಿದುಕೊಂಡಿದೆ. ಈ ಮರಕ್ಕೆ ನೀರುಣಿಸಿ ಮತ್ತೆ ಚಿಗುರೊಡೆಯುವಂತೆ ಮಾಡುತ್ತಿರುವ ಆಸ್ಪತ್ರೆ ನೌಕರ, ಮಾಙËಡ್ ಮೇಲ್ಪಾರ ನಿವಾಸಿ ಶಿವರಾಮನ್ ಅವರು ಮರಕ್ಕೆ ಹೂವಿನ ಕುಂಡಗಳನ್ನು ನೇತುಹಾಕಿ ಇದರಲ್ಲೂ ಹೂವಿನ ಗಿಡಗಳನ್ನು ಪೋಷಿಸಿಕೊಂಡು ಬರುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.
ಕಾಸರಗೊಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಇತರ ಸಿಬ್ಬಂದಿ ಆಸ್ಪತ್ರೆಯಿಂದ ವರ್ಗಾವಣೆಗೊಂಡು ತೆರಳುವಾಗ ಹಾಗೂ ನಿವೃತ್ತರಾಗುವ ಸಂದರ್ಭ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದ ಹಲವಾರು ಹೂವಿನಕುಂಡಗಳನ್ನು ಆಸ್ಪತ್ರೆ ವಠಾರದಲ್ಲಿ ಎಲ್ಲೆಂದರಲ್ಲಿ ಇರಿಸಲಾಗಿತ್ತು. ಪರಿಸರ ಶುಚೀಕರಣ ನಡೆಸುವ ಮಧ್ಯೆ ಇವೆಲ್ಲವನ್ನೂ ಒಂದೆಡೆ ಇರಿಸಿ ಪೋಷಿಸುವ ಶಿವರಾಮನ್ ಅವರ ಕನಸಿಗೆ ರೆಂಬೆ ಕಟಾವುಗೊಳಿಸಿದ ಮಾವಿನ ಮರ ಆಸರೆ ಒದಗಿಸಿದೆ. ಹೂವಿನ ಕುಂಡಗಳನ್ನು ಮರದ ತಳಭಾಗದಿಂದ ತೊಡಗಿ ಮೇಲ್ಭಾಗದ ವರೆಗೆ ಕೊಂಬೆಗಳಲ್ಲಿರಿಸಿ ಬಳ್ಳಿಯಿಂದ ಬಿಗಿಯಲಾಗಿದೆ. ಇನ್ನು ಕೆಲವನ್ನು ನೇತುಹಾಕಲಾಗಿದೆ. ನಿತ್ಯ ಈ ಕುಂಡಗಳಿಗೆ ನೀರೆರೆಯುವ ಮೂಲಕ ಈ ಸಸಿಗಳನ್ನು ಶಿವರಮನ್ ಪೋಷಿಸಿಕೊಂಡು ಬರುತ್ತಾರೆ.
ರೆಂಬೆ ಕಟಾವುಗೊಳಿಸಿದ ಮಾವಿನ ಮರವನ್ನು ಮತ್ತೆ ಚಿಗುರೊಡೆಯುವಂತೆ ಮಾಡುವುದರ ಜತೆಗೆ ಈ ಮರವನ್ನು ಆಸರೆಯಾಗಿಸಿ ಮತ್ತಷ್ಟು ಸಸಿಗಳನ್ನು ಬೆಳೆಸುವುದು ಮನದ ಇಚ್ಛೆಯಾಗಿದೆ ಎಂಬುದಾಗಿ ಶಿವರಾಮನ್ ತಿಳಿಸುತ್ತಾರೆ.
ಹತ್ತು ಹಲವು ಮರಗಳಿಂದ ಕಂಗೊಳಿಸುತ್ತಿದ್ದ ಜನರಲ್ ಆಸ್ಪತ್ರೆ ವಠಾರವನ್ನು ಇಂದು ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಬಲಿಕೊಟ್ಟು ಬರಿದುಮಾಡಲಾಗಿದೆ. ಈ ಮಧ್ಯೆ ರೆಂಬೆ ಕಡಿದ ಬೃಹತ್ ಮರವೊಂದನ್ನು ಮತ್ತೆ ಚಿಗುರೊಡೆಯುವಂತೆ ಮಾಡುವ ಹಾಗೂ ಇದರಲ್ಲಿ ಹೂವಿನ ಸಸಿಗಳನ್ನು ಬೆಳೆಸುತ್ತಿರುವ ಶಿವರಾಮನ್ ಅವರ ಚಿಂತನೆಗೆ ಪರಿಸರವಾದಿಗಳೂ ಭೇಷ್ ಅನ್ನುತ್ತಿದ್ದಾರೆ.


