ನವದೆಹಲಿ: 63 ವಿದೇಶಿಯರನ್ನು ಹಲವು ವರ್ಷಗಳಿಂದ ಗಡಿಪಾರು ಮಾಡದಿರುವ ಅಸ್ಸಾಂ ಸರ್ಕಾರದ ನಡವಳಿಕೆಯ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಸ್ಸಾಂ ಸರ್ಕಾರದ ವಶದಲ್ಲಿರುವ 63 ವಿದೇಶಿಯರ ಗಡಿಪಾರು ಹಾಗೂ ಬಂಧನ ಕೇಂದ್ರಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಉಜ್ಜಲ್ ಭುಯಾನ್ ಅವರ ಪೀಠ ವಿಚಾರಣೆ ನಡೆಸಿತು.
ನಿಮ್ಮ ವಶದಲ್ಲಿರುವ ವಿದೇಶಿಗರನ್ನು ಅವರವರ ದೇಶಕ್ಕೆ ಕಳಿಸುವ ಬಗ್ಗೆ ಯಾವುದಾದರೂ ಮುಹೂರ್ತಕ್ಕೆ ಕಾಯುತ್ತಿದ್ದೀರಾ ಎಂದು ಅಸ್ಸಾಂ ಸರ್ಕಾರದ ಪರವಾಗಿ ಹಾಜರಿದ್ದ ವಕೀಲರನ್ನು ಪೀಠ ಪ್ರಶ್ನಿಸಿತು.
ವಿದೇಶಿಗರೆಂದು ಘೋಷಿಸಲ್ಪಟ್ಟವರನ್ನು ಅವರ ದೇಶಕ್ಕೆ ಕಳಿಸುವುದನ್ನು ಬಿಟ್ಟು ಅನಿರ್ಧಿಷ್ಟಾವಧಿಕಾಲ ಬಂಧನದಲ್ಲಿ ಇಟ್ಟಿದ್ದಿರಿ. ಅವರ ವಿಳಾಸ ನಮಗೆ ತಿಳಿದಿಲ್ಲ ಎಂದು ಹೇಳುತ್ತಿರಾ, ಅದರ ಚಿಂತೆ ನಿಮಗೇಕೆ? ಏನಾದರೂ ಒಳ್ಳೆಯ ಮುಹೂರ್ತಕ್ಕೆ ಕಾಯುತ್ತಿದ್ದಿರಾ ಎಂದು ಪ್ರಶ್ನಿಸಿತು.
ಒಮ್ಮೆ ವಿದೇಶಿಗನೆಂದು ಗುರುತಿಸಲಾದ ವ್ಯಕ್ತಿಯನ್ನು ಶಾಶ್ವತವಾಗಿ ಬಂಧನದಲ್ಲಿರಿಸಲು ಆಗುವುದಿಲ್ಲ. ಸಂವಿಧಾನದ 21 ನೇ ವಿಧಿಯಲ್ಲಿಯೇ ಇದರ ಬಗ್ಗೆ ಉಲ್ಲೇಖ ಇದೆ. ವಿದೇಶಿಗನೆಂದು ಬಂಧಿಸಿದ ಮೇಲೆ ತಾರ್ಕಿಕ ಅಂತ್ಯ ಕಾಣಿಸಬೇಕು. ನೀವು ಅಸ್ಸಾಂನಲ್ಲಿ ಅನೇಕ ವಿದೇಶಿಗರ ಬಂಧನ ಕೇಂದ್ರ ತೆರೆದಿದ್ದೀರಿ. ಆದರೆ, ಎಷ್ಟು ಮಂದಿಯನ್ನು ಗಡಿಪಾರು ಮಾಡಿದ್ದೀರಿ? ಎಂದು ಪ್ರಶ್ನಿಸಿದೆ.
ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ ಈ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.





