ಮಹಾಕುಂಭನಗರ, ಉತ್ತರಪ್ರದೇಶ: ಪ್ರಯಾಗ್‌ರಾಜ್‌ನ ಗಂಗಾ ನದಿಯ ದಡದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ನಿತ್ಯವೂ ಕೋಟ್ಯಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಇಂದು ಭೂತಾನ್ ದೊರೆ ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗ್‌ಚುಕ್ ಅವರು ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗ್‌ಚುಕ್ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಂಪುಟ ಸಚಿವರಾದ ಸ್ವತಂತ್ರ ದೇವ್ ಸಿಂಗ್, ನಂದ ಗೋಪಾಲ್ ಗುಪ್ತಾ ಅವರು ಸಾಥ್ ನೀಡಿದ್ದಾರೆ. ವಾಂಗಚುಕ್ ಅವರು ಪುಣ್ಯ ಸ್ಥಾನದ ಬಳಿಕ ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡಿದ್ದಾರೆ.
ಸೋಮವಾರ ಲಖನೌಗೆ ಬಂದಿಳಿದ ಭೂತಾನ್ ದೊರೆಯನ್ನು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಿದ್ದರು. ನಂತರ ರಾಜಭವನಕ್ಕೆ ತೆರಳಿದ ಅವರಿಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಆತಿಥ್ಯ ನೀಡಿದ್ದರು.
ಇದೇ ವೇಳೆ ವಾಂಗ್‌ಚುಕ್ ಅವರು ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ್ದರು. ಜತೆಗೆ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಆದಿತ್ಯನಾಥ ಅವರೊಂದಿಗೆ ಭಾರತ-ಭೂತಾನ್ ಸಂಬಂಧ ಬಗ್ಗೆ ಚರ್ಚೆಗಳನ್ನು ನಡೆಸಿದ್ದರು.
ಮಹಾಕುಂಭ ಮೇಳದ ಮೂರನೇ 'ಅಮೃತ ಸ್ನಾನ' ತ್ರಿವೇಣಿ ಸಂಗಮದಲ್ಲಿ ಸೋಮವಾರ ಸುಸೂತ್ರವಾಗಿ ನಡೆಯಿತು. ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳ ಲಕ್ಷಾಂತರ ಭಕ್ತರು 'ವಸಂತ ಪಂಚಮಿ'ಯ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡಿದ್ದರು.
ಜನವರಿ 29ರಂದು 'ಮೌನಿ ಅಮಾವಾಸ್ಯೆ' ದಿನ ನಡೆದ ಅಮೃತ ಸ್ನಾನದ ವೇಳೆ ಉಂಟಾದ ಕಾಲ್ತುಳಿತ ದಲ್ಲಿ 30 ಭಕ್ತರು ಮೃತಪಟ್ಟಿದ್ದರು. ಇಂಥ ಅವಘಡಗಳು ಮರುಕಳಿಸದಿರಲಿ ಎಂದು ಕುಂಭಮೇಳದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರು.
ಉತ್ತರ ಪ್ರದೇಶ ಸರ್ಕಾರವು ಮೇಳದ ವಲಯದ ವ್ಯವಸ್ಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ತೆಗೆದು ಕೊಂಡಿತ್ತು. ಇದರಿಂದ ಸೋಮವಾರ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.





