ಕೊಚ್ಚಿ/ನವದೆಹಲಿ: 'ನಮ್ಮ ಕಂಪನಿಯು ಸಿಎಸ್‌ಆರ್ ಯೋಜನೆಯಡಿ ದ್ವಿಚಕ್ರ ವಾಹನಗಳನ್ನು, ಲ್ಯಾಪ್‌ಟಾಪ್ ಹಾಗೂ ಗೃಹ ಬಳಕೆ ವಸ್ತುಗಳನ್ನು ಅರ್ಧ ಬೆಲೆಗೆ ಕೊಡುತ್ತೇವೆ. ಇದಕ್ಕೆ ನೀವು ಮೊದಲು ಕೆಲವು ಮೊತ್ತವನ್ನು ನಮಗೆ ನೀಡಬೇಕು' ಎಂದು ಹೇಳಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಕೇರಳದ ವಿವಿಧ ಭಾಗಗಳಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿತು.
ಇಡುಕ್ಕಿ ಜಿಲ್ಲೆಯ ಆನಂದು ಕೃಷ್ಣನ್ ಎಂಬುವರು ಈ ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಇವರನ್ನು ಬಂಧಿಸಲಾಗಿದೆ. ಕೆಲವು ರಾಜಕಾರಣಿಗಳು, ಎಲೆಕ್ಟ್ರಾನಿಕ್ ಹಾಗೂ ಕಾರು ಡೀಲರ್‌ಗಳು, ಕೆಲವು ಸಹಕಾರ ಬ್ಯಾಂಕ್‌ಗಳು, ರಾಸಾಯನಿಕ ತಯಾರಿಕಾ ಕಂಪನಿಗಳ ಬಗ್ಗೆಯೂ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ವಂಚನೆ ಕುರಿತು ಕೇರಳ ಪೊಲೀಸ್ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. 'ಒಟ್ಟು ₹37 ಕೋಟಿಯಷ್ಟು ಅಕ್ರಮ ನಡೆದಿದೆ' ಎಂದು ಪೊಲೀಸರು ಅಂದಾಜಿಸಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯವು 'ಒಟ್ಟು ₹450 ಕೋಟಿಯಷ್ಟು ಅಕ್ರಮ ನಡೆದಿರಬಹುದು' ಎಂದು ಅಂದಾಜಿಸಿದೆ.






