ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಹೊಸ ನಿರ್ಮಾಣಗಳು ಹಾಗೂ ಹೆಚ್ಚುವರಿ ಸೌಲಭ್ಯಗಳು ಪ್ರವಾಸಿಗರು ಹಾಗೂ ಪ್ರಯಾಣಿಕರಿಗೆ ಸುಧಾರಿತ ಅನುಭವವನ್ನು ಒದಗಿಸುವುದಕ್ಕೆ ಸಮರ್ಪಿತವಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಷನ್ ಮಾಸ್ಟರ್ ಕಚೇರಿಗಾಗಿ ಹೊಸ ಕಟ್ಟಡ ನಿರ್ಮಾಣ ಕೆಲಸಗಳು ಈಗ ಪೂರ್ಣಗೊಂಡಿವೆ. ಜೊತೆಗೆ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಉದ್ದವನ್ನು ಹೆಚ್ಚಿಸುವ ಹಾಗೂ ಎರಡು ಪ್ಲಾಟ್‍ಫಾರ್ಮ್‍ಗಳ ಪುನರ್‍ನವೀಕರಣದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿವೆ.
ಹಳೆಯ ಪ್ಲಾಟ್‍ಫಾರ್ಮ್‍ಗಳನ್ನು ಕೆಡವಿ 85 ಸೆಂ.ಮೀ. ಎತ್ತರಕ್ಕೆ ಮೇಲಕ್ಕೆತ್ತಲಾಗಿದೆ. 50 ಸೆಂಟಿ ಮೀಟರ್ ಉದ್ದದ ಹಳೆಯ ಪ್ಲಾಟ್‍ಫಾರ್ಮ್‍ನ ವಿಸ್ತರಣೆಯು 70 ಸೆಂಟಿ ಮೀಟರ್‍ಗಳಷ್ಟು ವಿಸ್ತಾರ ಮಾಡಲಾಗಿದೆ. ಜೊತೆಯಾಗಿ ನಿಲ್ದಾಣದ ಇಬ್ಬದಿಗಳಲ್ಲೂ ಪಾರ್ಕಿಂಗ್ ಸೌಲಭ್ಯಗಳನ್ನು ಕೂಡ ಒದಗಿಸಲಾಗಿದೆ.
ಇನ್ನೂ ಹೆಚ್ಚಿನ ಸೌಲಭ್ಯಗಳಿಗಾಗಿ ಪ್ರಯಾಣಿಕರಿಗಾಗಿ ವಿಶ್ರಾಂತಿ ಕೊಠಡಿಯ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿವೆ. ಪ್ರಸ್ತುತ, ಸ್ಟೇಷನ್‍ನ ಮುಂಭಾಗದಲ್ಲಿ ಕೂರುವ ಸ್ಥಳದಲ್ಲಿ ಮಾತ್ರ ಮೇಲ್ಬಾಗದ ಸೀಟ್‍ಗಳನ್ನು ಅಳವಡಿಸಲಾಗಿದೆ. ಆದರೆ ಇತರ ಭಾಗಗಳಲ್ಲಿ ಕೂಡಾ ಈ ರೀತಿಯಾಗಿ ಮೇಲ್ಬಾಗದ ಶೀಟ್ ಗಳನ್ನು ಅವವಡಿಸ ಬೇಕಾಗಿದೆ. ಅದೇ ರೀತಿ ರಿಸರ್ವೇಶನ್ ಸೌಲಭ್ಯ ಹಾಗೂ ವಿಶ್ರಾಂತಿ ಕೋಣೆಗಳು ಇಲ್ಲದಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಮಂಜೇಶ್ವರ ರೈಲು ನಿಲ್ದಾಣ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳ ಸಮೀಪದಲ್ಲಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸದಸ್ಯರು ಈ ನಿಲ್ದಾಣವನ್ನು ಆಶ್ರಯಿಸುತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಇನ್ನೂ ಹೆಚ್ಚಿನ ರೈಲು ನಿಲುಗಡೆ ಲಭ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ, ಮಾವೇಲಿ ಎಕ್ಸ್‍ಪ್ರೆಸ್, ಪರಶುರಾಮ್, ಮಂಗಳಾ-ಲಕ್ಷದ್ವೀಪ್, ನೇತ್ರಾವತಿ, ಹಾಗೂ ಮಂಗಳೂರು ಸೆಂಟ್ರಲ್ ಮೇಲ್ ರೈಲುಗಳಿಗೆ ನಿಲುಗಡೆ ನೀಡುವ ಅವಶ್ಯಕತೆ ಇದೆ.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡ ಬಳಿಕ, ರೈಲ್ವೇ ನಿಲ್ದಾಣದ ಉತ್ತರ ಭಾಗದಿಂದ ಆಗಮಿಸುವ ಪ್ರಯಾಣಿಕರ ತಲುಪುವುದು ಕಷ್ಟಕರವಾಗಬಹುದು. ಈ ಮೊದಲು ಬಂಗ್ರಮಂಜೇಶ್ವರ ಪ್ರದೇಶದಿಂದ ರೈಲು ನಿಲ್ದಾಣವನ್ನು ತಲುಪಲು ಪ್ರಯಾಣಿಕರು ಅಡ್ಡ ದಾರಿಗಳನ್ನು ಉಪಯೋಗಿಸುತ್ತಿರುವುದು ಹಲವಾರು ಅಪಘಾತಗಳಿಗೆ ಕಾರಣವಾಗಿತ್ತು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಟೂರಿಸಂ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಸಮೀಕ್ಷೆಯ ಪ್ರಕಾರ, ಈ ನಿಲ್ದಾಣಕ್ಕೆ ಇನ್ನಷ್ಟ್ಟು ರೈಲುಗಳು ಸ್ಥಾಪಿಸುವ ಬಗ್ಗೆ ಮಹತ್ವಪೂರ್ಣ ಶಿಫಾರಸುಗಳು ಪಡೆದಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿಗಳ ಸಮೀಕ್ಷೆಯ ವರದಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಮುಹಮ್ಮದ್ ಅಲಿ ಮತ್ತು ಟ್ರಾವೆಲ್ ಹಾಗೂ ಟೂರಿಸಂ ವಿಭಾಗದ ಮುಖ್ಯಸ್ಥ ಡಾ. ಸಿಂಧು ಜೋಸೆಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಅವರಿಗೆ ಸಲ್ಲಿಸಲಾಗಿದೆ.




.jpg)

