ಕಾಸರಗೋಡು : ಜಿಲ್ಲೆಯ ಹತ್ತಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಚಿರತೆ ಸೇರಿದಂತೆ ವನ್ಯ ಮೃಗ ಹಾವಳಿ ವ್ಯಾಪಕಗೊಂಡಿದ್ದು, ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು, ವನ್ಯ ಮೃಗ ಹಾವಳಿ ತಡೆಗೆ ದೂರಗಾಮಿ ಯೋಜನೆ ರಚಿಸಲು ಸರ್ಕಾರ ತಯಾರಾಗುವಂತೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆಗ್ರಹಿಸಿದ್ದಾರೆ.
ಕೇರಳದಲ್ಲಿ ಆನೆ, ಹುಲಿ, ಚಿರತೆ, ಕಾಡುಹಂದಿ ಮುಂತಾದುವುಗಳಿಂದ ನಾಗರಿಕರ ಬದುಕು ದುಸ್ತರವಾಗಿದೆ. ಕಾಸರಗೋಡು ಜಿಲ್ಲೆಯ ಬೋವಿಕ್ಕಾನ, ಬೇಡಡ್ಕ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಹಾಡಹಗಲು ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಅಪಾಯ ವಲಯದಲ್ಲಿ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಕೃಷಿಕರು ನಿರಂತರ ವನ್ಯಮೃಗ ಹಾವಳಿಯ ನಡುವೆ ಜೀವನ ಸಾಗಿಸಬೇಕಾಗಿ ಬರುತ್ತಿದ್ದರೂ, ಈ ಬಗ್ಗೆ ಪರಿಣಾಮಕಾರಿ ಯೋಜನೆ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭಯದ ವಾತಾವರಣದಲ್ಲಿ ಬದುಕು ಸಾಗಿಸಬೇಕಾದ ಸ್ಥಿತಿಯಿದೆ. .
ವನ್ಯಮೃಗ ಹಾವಳಿ ತಡೆಗಟ್ಟಲು ದೇಶದ ಉತ್ತರದ ರಾಜ್ಯಗಳು ಕೈಗೊಳ್ಳುತ್ತಿರುವಂತಹ ಆಧುನಿಕ ಯೋಜನೆಗಳನ್ನು ಕೇರಳದಲ್ಲೂ ಅಳವಡಿಸಿಕೊಳ್ಳುವ ಮೂಲಕ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಿರುವ ಜನತೆಯ ಬದುಕಿಗೆ ಭದ್ರತೆ ಒದಗಿಸಬೇಕಾದುದು ಸರ್ಕಾರದ ಕರ್ತವ್ಯ ಎಂದು ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.




