ನವದೆಹಲಿ: ಪಶ್ಚಿಮ ಬಂಗಾಳಕ್ಕೆ 'ಬಂಗಾಳ' ಎಂದು ಮರುನಾಮಕರಣ ಮಾಡುವಂತೆ ತೃಣಮೂಲ ಕಾಂಗ್ರೆಸ್ ಪಕ್ಷವು(ಟಿಎಂಸಿ) ಒತ್ತಾಯಿಸಿದೆ. ಇದು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಹೇಳಿದೆ.
ರಾಜ್ಯಸಭೆ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸದಸ್ಯ ರಿತಬ್ರತ ಬ್ಯಾನರ್ಜಿ, ಪಶ್ಚಿಮ ಬಂಗಾಳಕ್ಕೆ ಮರುನಾಮಕರಣ ಮಾಡುವ ಕುರಿತಂತೆ 2018ರ ಜುಲೈನಲ್ಲಿ ರಾಜ್ಯದ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಮರು ನಾಮಕರಣವು ನಮ್ಮ ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಗೆ ಅನುಗುಣವಾಗಿರುತ್ತದೆ. ನಮ್ಮ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ನಮ್ಮ ರಾಜ್ಯದ ಹೆಸರನ್ನು ಬದಲಿಸಬೇಕು ಮತ್ತು ಜನರ ತೀರ್ಪನ್ನು ಗೌರವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
'1947ರ ವಿಭಜನೆಯು ಬಂಗಾಳವನ್ನು ವಿಭಜಿಸಿತು. ಭಾರತದ ಭಾಗವನ್ನು ಪಶ್ಚಿಮ ಬಂಗಾಳ ಎಂದು ಕರೆಯಲಾಯಿತು. ಇನ್ನೊಂದು ಭಾಗವನ್ನು ಪೂರ್ವ ಪಾಕಿಸ್ತಾನ ಎಂದು ಹೆಸರಿಸಲಾಯಿತು. 1971ರಲ್ಲಿ ಅದು ಸ್ವಾತಂತ್ರ್ಯ ಘೋಷಿಸಿಕೊಂಡು, ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ರಚನೆಯಾಯಿತು. ಇಂದು ಪೂರ್ವ ಪಾಕಿಸ್ತಾನ ಎಂಬುದೇ ಇಲ್ಲ. ನಮ್ಮ ರಾಜ್ಯದ ಹೆಸರನ್ನು ಬದಲಾಯಿಸಬೇಕಾಗಿದೆ. ಪಶ್ಚಿಮ ಬಂಗಾಳದ ಜನಾದೇಶವನ್ನು ಗೌರವಿಸಬೇಕಾಗಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
2011ರಲ್ಲಿ ಒರಿಸ್ಸಾ ರಾಜ್ಯದ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಗಿತ್ತು. ಅದಾದ ಬಳಿಕ ಯಾವ ರಾಜ್ಯದ ಹೆಸರನ್ನೂ ಬದಲಿಸಲಾಗಿಲ್ಲ.
ಇದಕ್ಕೂ ಮೊದಲು ಹಲವು ನಗರಗಳ ಹೆಸರು ಬದಲಿಸಲಾಗಿದೆ. 1995ರಲ್ಲಿ ಬಾಂಬೆಯನ್ನು ಮುಂಬೈ ಎಂದು, 1996ರಲ್ಲಿ ಮದ್ರಾಸ್ ಅನ್ನು ಚೆನ್ನೈ ಎಂದು, 2001ರಲ್ಲಿ ಕಲ್ಕತ್ತಾವನ್ನು ಕೋಲ್ಕತ್ತ ಎಂದು ಮತ್ತು 2014ಲ್ಲಿ ಬ್ಯಾಂಗಳೂರ್ ಅನ್ನು ಬೆಂಗಳೂರು ಎಂದು ಮರುನಾಮಕರಣ ಮಾಡಲಾಗಿದೆ.




