ನವದೆಹಲಿ: 'ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ವಾಪಸ್ ಕಳುಹಿಸಿರುವ ರೀತಿ ಭಾರತ ಮತ್ತು ಭಾರತದ ಘನತೆಗೆ ಆದ ಅವಮಾನವಾಗಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಇಂದು (ಗುರುವಾರ) ಹೇಳಿದ್ದಾರೆ.
ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ವಾಪಸು ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಅಮೆರಿಕದ ಸೇನಾ ವಿಮಾನದ ಮೂಲಕ ವಾಪಸ್ ಕಳುಹಿಸಲಾಗಿತ್ತು.
ಆದರೆ ಕೈ, ಕಾಲುಗಳಿಗೆ ಕೋಳ ತೊಡಿಸಿ ಅವಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಅಮೃತಸರದಲ್ಲಿ ವಿಮಾನ ಬಂದಿಳಿದ ಬಳಿಕವಷ್ಟೇ ಕೋಳ ಬಿಡಿಸಲಾಯಿತು ಎಂದು ವಲಸಿಗರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತರೂರ್, 'ಭಾರತ ಸರ್ಕಾರವು ಅಮೆರಿಕಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕಿದೆ. ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲು ಅಮೆರಿಕಕ್ಕೆ ಯಾವುದೇ ಹಕ್ಕಿಲ್ಲ' ಎಂದು ಹೇಳಿದ್ದಾರೆ.
'ಅಮೆರಿಕ ನಡೆದುಕೊಂಡ ರೀತಿಯನ್ನು ನಾವು ಪ್ರತಿಭಟಿಸುತ್ತೇವೆ. ಅವರ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಗಡೀಪಾರು ಮಾಡುವ ಎಲ್ಲ ಹಕ್ಕು ಅವರಿಗಿದೆ. ಭಾರತೀಯರೆಂದು ಸಾಬೀತಾದರೆ ಅವರನ್ನು ಬರಮಾಡಿಕೊಳ್ಳುವ ಕರ್ತವ್ಯ ನಮ್ಮದಾಗಿದೆ. ಆದರೆ ಮಿಲಿಟರಿ ವಿಮಾನದಲ್ಲಿ ಮತ್ತು ಕೈಗಳಿಗೆ ಕೋಳ ಹಾಕಿ ವಾಪಸ್ ಕಳುಹಿಸುವುದು ನಿಜಕ್ಕೂ ಭಾರತಕ್ಕೆ ಮಾಡಿದ ಅವಮಾನವಾಗಿದೆ. ಇದರಿಂದ ಭಾರತದ ಘನತೆಗೆ ಧಕ್ಕೆಯಾಗಿದೆ. ಇದನ್ನು ಪ್ರತಿಭಟಿಸಬೇಕು' ಎಂದು ಆಗ್ರಹಿಸಿದ್ದಾರೆ.
'ನೀವು ನಾಗರಿಕ ವಿಮಾನದಲ್ಲಿ ಅವರನ್ನು ಕಳುಹಿಸಬಹುದು. ಅವರು ನಮ್ಮ ನಾಗರಿಕರಾಗಿದ್ದರೆ ನಾವು ಅವರನ್ನು ಸ್ವೀಕರಿಸುತ್ತೇವೆ. ಆದರೆ ಈ ರೀತಿಯ ಕ್ರಮ ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸ್ಪಷ್ಟ ಸಂದೇಶ ರವಾನಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
'ದೌರ್ಜನ್ಯ ರೂಪದ ಅಮೆರಿಕದ ಇಂಥ ನಡವಳಿಕೆಯನ್ನು ಖಂಡಿಸಿ ಭಾರತ ವಿವರಣೆ ಪಡೆಯಬೇಕಿದೆ' ಎಂದು ತರೂರ್ ಬಯಸಿದ್ದಾರೆ.




