ಎರ್ನಾಕುಳಂ: ಭಾರೀ ಚರ್ಚೆಗೆ ಕಾರಣವಾಗಿದ್ದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮೂಡಪ್ಪ ಸೇವಾ ಸಹಿತವಾದ ಬ್ರಹ್ಮಕಲಶೋತ್ಸವವವನ್ನು ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಹಾಗೂ ತಂತ್ರಿ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿಗಳಿಬ್ಬರೂ ಜಂಟಿಯಾಗಿ ನೆರವೇರಿಸಬೇಕೆಂದು ಕೇರಳ ಹೈಕೋರ್ಟು ಮಹತ್ತರ ತೀರ್ಪು ನೀಡಿದೆ.
ಇದೇ ಮಾರ್ಚ್ 27 ರಿಂದ ಏಪ್ರಿಲ್ 7ರ ತನಕ ಐತಿಹಾಸಿಕವಾಗಿ ಜರಗುವ ಮಧೂರು ಬ್ರಹ್ಮಕಲಶದ ಕಾರ್ಮಿಕತ್ವದ ವಿಚಾರದಲ್ಲಿ ವಿವಾದ ಉಂಟಾಗಿ, ಹೈಕೋರ್ಟಿಗೆ ಕೇಸು ದಾಖಲಿಸಲ್ಪಟ್ಟ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.
ಬ್ರಹ್ಮಕಲಶೋತ್ಸವ ಸಹಿತ ಮೂಡಪ್ಪ ಸೇವೆಯನ್ನು ಮಧೂರು ಕ್ಷೇತ್ರದ ಪರಂಪರಾಗತ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅವರನ್ನು ಹೊರತುಪಡಿಸಿ, ಬದಲಿಗೆ ದೇರೆಬೈಲು ತಂತ್ರಿಗಳ ಮುಖ್ಯ ಕಾರ್ಮಿಕತ್ವದಲ್ಲಿ ನಡೆಸಲು ಮಲಬಾರ್ ದೇವಸ್ವಂ ಮಂಡಳಿಯನ್ನೊಳಗೊಂಡ ಬ್ರಹ್ಮಕಲಶೋತ್ಸವ ಸಮಿತಿ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇಸು ಪರಿಗಣಿಸಿ, ದೇವಸ್ವಂ ಮಂಡಳಿ ತೀರ್ಮಾನವನ್ನು ಇದೀಗ ಹೈಕೋರ್ಟು ರದ್ದುಪಡಿಸಿದೆ.
ಅಷ್ಟಮಂಗಲ ಪ್ರಶ್ನಾವಿಧಿಯಂತೆ ಉಭಯ ತಂತ್ರಿಗಳನ್ನೊಳಗೊಂಡು ಸಮಾಗಮ-ಸಮಾರಾಧನೆ ನಡೆಸಿ, ಬ್ರಹ್ಮಕಲಶೋತ್ಸವ ನಡೆಸಲು ಉಭಯ ತಂತ್ರಿಗಳೂ ಸಹಕರಿಸುವುದಾಗಿ ಘೋಷಿಸಲು ಮಲಬಾರ್ ದೇವಸ್ವಂ ಕಮಿಷನರ್, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಹೈಕೋರ್ಟಿಗೆ ದೂರು ದಾಖಲಿಸಿದ ಪ್ರತಿನಿಧಿಗಳನೊಳಗೊಂಡ ಸಂಯುಕ್ತ ಸಭೆ ನಡೆಸಬೇಕೆಂದು ಹೈಕೋರ್ಟು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಈ ವಿಷಯದಲ್ಲಿ ಈಹಿಂದೆ ಕೈಗೊಂಡ ನಿರ್ಣಯಗಳಲ್ಲಿ ಅಗತ್ಯ ಬದಲಾವಣೆ ಬೇಕಿದ್ದರೆ ಮಾಡಬಹುದಾದ ಅಧಿಕಾರವನ್ನು ದೇವಸ್ವಂ ಕಮಿಷನರ್ ಅವರಿಗೆ ನೀಡಿರುವುದಾಗಿ ಹೈಕೋರ್ಟು ತೀರ್ಪು ಉಲ್ಲೇಖಿಸಿದೆ.







