HEALTH TIPS

ರೊಹಿಂಗ್ಯಾಗಳು, ಅಕ್ರಮ ಬಾಂಗ್ಲಾ ವಲಸಿಗರನ್ನು ಎಎಪಿ ಪೋಷಿಸುತ್ತಿದೆ: ಬಿಜೆಪಿ ಆರೋಪ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯರನ್ನು ಎಎಪಿ ಪೋಷಿಸುತ್ತಿದೆ. ಇದು ಜನಸಂಖ್ಯೆಯ ತಿರುಚುವಿಕೆಯಾಗುತ್ತಿದ್ದು, ಚುನಾವಣಾ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಬಿಜೆಪಿ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, 'ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರಿಂದ ಪೂರ್ವಾಂಚಲ ಮತ್ತು ಇತರ ರಾಜ್ಯಗಳ ಕಾರ್ಮಿಕರು ಉದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಈ ಅಂಶವನ್ನು ಜೆಎನ್‌ಯು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ' ಎಂದು ಹೇಳಿದ್ದಾರೆ.

'ರೊಹಿಂಗ್ಯಾ, ಬಾಂಗ್ಲಾದ ಅಕ್ರಮ ನುಸುಳುಕೋರರನ್ನು ರಕ್ಷಿಸುವಲ್ಲಿ ಮತ್ತು ನಕಲಿ ಮತದಾರರ ನೋಂದಣಿಗೆ ಅನುಕೂಲ ಮಾಡಿಕೊಡುವಲ್ಲಿ ಎಎಪಿ ನಿರ್ಣಾಯಕ ಪಾತ್ರ ವಹಿಸಿದೆ' ಎಂದು ಪ್ರೊಫೆಸರ್ ಮನುರಾಧಾ ಚೌಧರಿ ಮತ್ತು ಇತರರು ಸಿದ್ಧಪಡಿಸಿದ ವರದಿಯನ್ನು ಸಂಬಿತ್‌ ಪಾತ್ರ ಉಲ್ಲೇಖಿಸಿದ್ದಾರೆ.

'ದಲ್ಲಾಳಿಗಳ ಮತ್ತು ಧಾರ್ಮಿಕ ಪ್ರಚಾರಕರ ಅನೌಪಚಾರಿಕ ಜಾಲವು ನುಸುಳುಕೋರರಿಗೆ ನಕಲಿ ದಾಖಲೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗೆ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸುತ್ತಿರುವ ನುಸುಳುಕೋರರಿಂದ ಅಪರಾಧದ ಚಟುವಟಿಕೆಗಳು ಹೆಚ್ಚಾಗುತ್ತಿವೆ' ಎಂದು ಅವರು ದೂರಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೆರಡೇ ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ ಇಂದು (ಸೋಮವಾರ) ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ಕೊನೆಯ ದಿನದ ಪ್ರಚಾರದಲ್ಲಿ ಬಿಜೆಪಿ ದೆಹಲಿಯಾದ್ಯಂತ 22 ರೋಡ್‌ ಶೋಗಳು ಮತ್ತು ರ್‍ಯಾಲಿಗಳನ್ನು ಹಮ್ಮಿಕೊಂಡಿದೆ. 25 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕೇಸರಿ ಪಾಳಯವಿದೆ.

ಇನ್ನೊಂದೆಡೆ, ಉಚಿತ ಕಲ್ಯಾಣ ಯೋಜನೆಗಳ ಮೇಲೆ ಆಡಳಿತ ನಡೆಸಿಕೊಂಡು ಬಂದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿದೆ. ಇತ್ತ, 2013ರವರೆಗೆ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌, ಕಳೆದುಕೊಂಡಲ್ಲೇ ಮತ್ತೆ ನೆಲೆ ಕಂಡುಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಮೂರು ಪಕ್ಷಗಳು ಗೆಲುವಿಗಾಗಿ ಸೆಣೆಸಾಟ ನಡೆಸುತ್ತಿದ್ದು, ಆಕರ್ಷಕ ಭರವಸೆಗಳು, ಘೋಷಣೆಗಳು, ಪರಸ್ಪರ ಮಾತಿನ ಏಟು- ಎದುರೇಟುಗಳು, ಪ್ರಚಾರ ಗೀತೆಗಳಿಂದ ದೆಹಲಿ ಚುನಾವಣಾ ಅಖಾಡ ರಂಗೇರಿದೆ.

70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries