ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಕಾಲ್ತುಳಿತದಿಂದ 30 ಮಂದಿ ಮೃತಪಟ್ಟ ದುರ್ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್, ಭಕ್ತಾಧಿಗಳ ಸುರಕ್ಷತೆಗೆ ಮಾರ್ಗಸೂಚಿ ಬಿಡುಗಡೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಗೆ ನಿರಾಕರಿಸಿದೆ.
ಇದೊಂದು ದುರದೃಷ್ಟಕರ ಮತ್ತು ಆತಂಕಕಾರಿ ಸಂಗತಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ. ಆದರೆ, ಈ ಸಂಬಂಧ ನೀವು ಅಲಹಾಬಾದ್ ಹೈಕೋರ್ಟ್‌ಗೆ ಹೋಗಿ ಎಂದು ಹೇಳಿದೆ.
ಹಿಂದೂ ಕ್ಯಾಲೆಂಡರ್‌ನ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶದಲ್ಲಿ ಮುಂಜಾನೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ. 60 ಜನರು ಗಾಯಗೊಂಡಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ಸಂಬಂಧ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಪ್ರಸ್ತುತ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಅಂಗೀಕರಿಸಬಾರದು ಎಂದು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ವಾದವನ್ನು ಪೀಠವು ಪರಿಗಣಿಸಿದೆ.
ಪ್ರಯಾಗ್‌ರಾಜ್‌ನ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಭಕ್ತರ ಸುರಕ್ಷತೆ ದೃಷ್ಟಿಯಿಂದ ಮಾರ್ಗಸೂಚಿ ಹೊರಡಿಸುವಂತೆ ಕೋರಿ ವಕೀಲ ವಿಶಾಲ್ ತಿವಾರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾಗಿದ್ದ ಪಿಐಎಲ್, ಕಾಲ್ತುಳಿತಗಳನ್ನು ತಡೆಗಟ್ಟಲು ಮತ್ತು ಆರ್ಟಿಕಲ್ 21ರ ಅಡಿಯಲ್ಲಿ ಸಮಾನತೆ ಮತ್ತು ಜೀವನದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ಕೋರಿತ್ತು.





