ಮಹಾಕುಂಭ ನಗರ: ವಸಂತ ಪಂಚಮಿ ಹಿನ್ನೆಲೆ ಸೋಮವಾರ ಮಹಾಕುಂಭ ಮೇಳದಲ್ಲಿ ಮೂರನೇ ಅಮೃತ ಸ್ನಾನ ಆರಂಭವಾಗಿದೆ. ಸಂಗಮದಲ್ಲಿ ಸ್ನಾನ ಕೈಗೊಳ್ಳಲು ಸಾವಿರಾರು ಭಕ್ತರು ಮಹಾಕುಂಭ ನಗರದತ್ತ ಸಾಗುತ್ತಿದ್ದಾರೆ.
ಬೆಳಗಿನ ಜಾವವೇ ಸಾಧುಗಳು, ವಿವಿಧ ಅಖಾಡದ ನಾಗಾಸಾಧುಗಳು ತ್ರಿವೇಣಿ ಸಂಗಮಲ್ಲಿ ಮುಳುಗೆದ್ದು ಅಮೃತ ಸ್ನಾನವನ್ನು ಆರಂಭಿಸಿದರು.
ಬೆಳಗಿನ ಜಾವ 4 ಗಂಟೆ ವೇಳೆಗೆ 16.58 ಲಕ್ಷ ಭಕ್ತರು ಅಮೃತಸ್ನಾನ ಮಾಡಿದ್ದು, ಜ.13ರಿಂದ ಇಲ್ಲಿಯವರೆಗೆ ಒಟ್ಟು ಸಂಖ್ಯೆ 34.97 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದಾರೆ ಎಂದು ಮಾಹಿತಿ ನಿರ್ದೇಶಕ ಶಿಶಿರ್ ತಿಳಿಸಿದ್ದಾರೆ.
ಮೌನಿ ಅಮಾವಾಸ್ಯೆ ದಿನ ನಡೆದ ಅಮೃತ ಸ್ನಾನದ ವೇಳೆ ಕಾಲ್ತುಳಿದಲ್ಲಿ 30 ಮಂದಿ ಭಕ್ತರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಸಂತಿ ಪಂಚಮಿ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಉತ್ತರ ಪ್ರದೇಶ ಸರ್ಕಾರ ಭದ್ರತೆ ಮತ್ತು ಜನಸಂದಣಿ ನಿಯಂತ್ರಿಸುವ ಕ್ರಮಗಳನ್ನು ಕೈಗೊಂಡಿದೆ.
ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು 2019ರ ಅರ್ಧ ಕುಂಭಮೇಳವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅಧಿಕಾರಿಗಳ ತಂಡದ ಭಾಗವಾಗಿದ್ದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನುಚಂದ್ರ ಗೋಸ್ವಾಮಿ ಅವರನ್ನು ನಿಯೋಜಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಮಹಾಕುಂಭ ನಗರಕ್ಕೆ ಭೇಟಿ ನೀಡಿ ಸಂತರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಸಂಖ್ಯಾತ ಭಕ್ತರ ಪವಿತ್ರ ಸ್ನಾನ ಸಾಂಗೋಪಸಾಂಗವಾಗಿ ನಡೆಯುವಂತೆ ನಿರ್ದೇಶಿಸಿದ್ದಾರೆ.
ಯೋಗಿ ಭೇಟಿ ಬಳಿಕವೇ ಈ ಹಿರಿಯ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ.





