ಕೊಚ್ಚಿ: ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 25 ವರ್ಷದ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬಂಧಿತನನ್ನು ಕೋಝಿಕ್ಕೋಡ್‌ನ ಮೊಹಮ್ಮದ್ ನಿಶಾಲ್ ಎಂದು ಗುರುತಿಸಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಯು ಮಹಿಳೆಯೊಬ್ಬರ ಜತೆ ಸ್ನೇಹ ಬೆಳೆಸಿಕೊಂಡಿದ್ದ. ಆಕೆಯ ಖಾಸಗಿ ಫೋಟೊಗಳನ್ನು ಸಂಗ್ರಹಿಸಿಕೊಂಡು ಆಕೆಗೆ ಬೆದರಿಕೆಯೊಡ್ದಿದನು ಎಂದು ಪೊಲೀಸರು ಹೇಳಿದ್ದಾರೆ.
'ಖಾಸಗಿ ಫೋಟೊ, ವಿಡಿಯೊವನ್ನು ಆರೋಪಿ ಸಂಗ್ರಹಿಸಿಕೊಂಡಿದ್ದನು. ಬಳಿಕ ಅವುಗಳನ್ನು ನನ್ನ ಪತಿಗೆ ಕಳುಹಿಸುವುದಾಗಿ ಬೆದರಿಸಿ, ನನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





