HEALTH TIPS

ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿ: ಯುಎಸ್‌ಎಐಡಿ ವಿವಾದದ ಬಗ್ಗೆ ಧನಕರ್

ನವದೆಹಲಿ: ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯ (ಯುಎಸ್‌ಎಐಡಿ) ನೆರವಿನ ವಿಚಾರದಲ್ಲಿ ಎದ್ದಿರುವ ವಿವಾದದಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರೂ ಮಧ್ಯಪ್ರವೇಶಿಸಿದ್ದು, 'ದೇಶದ ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡುವ ಪ್ರಯತ್ನದ ಭಾಗ ಇದು' ಎಂದು ಟೀಕಿಸಿದ್ದಾರೆ.

ಈ ನಡುವೆ, ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಯುಎಸ್‌ಎಐಡಿ ನಿಧಿಯನ್ನು ಬಳಲಾಗಿದೆ ಎಂಬ ಆರೋಪದ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ವಾಕ್ಸಮರ ಶುಕ್ರವಾರವೂ ಮುಂದುವರಿದಿದೆ.

'ಭಾರತದಲ್ಲಿ ಮತದಾನ ಹೆಚ್ಚಿಸಲು ನಾವೇಕೆ ₹182 ಕೋಟಿ (2.1 ಕೋಟಿ ಡಾಲರ್‌) ಖರ್ಚು ಮಾಡಬೇಕು? ಬಹುಶಃ ಅವರು (ಹಿಂದಿನ ಅಧ್ಯಕ್ಷ ಜೋ ಬೈಡನ್ ಆಡಳಿತ) ಭಾರತದಲ್ಲಿ ಬೇರೆ ಯಾರನ್ನೋ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಟ್ರಂಪ್‌ ಹೇಳಿಕೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ಧನಕರ್, 'ಅಮೆರಿಕದ ಅಧ್ಯಕ್ಷರು ಸಂಪೂರ್ಣ ಜವಾಬ್ದಾರಿಯೊಂದಿಗೆ ಬಹಿರಂಗಪಡಿಸಿರುವ ಮಾಹಿತಿಯನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ' ಎಂದರು.

'ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಈ ಮಾತನ್ನು ಹೇಳಿದ್ದಾರೆ ಎಂದು ನನಗೆ ಖಾತ್ರಿಯಿದೆ. ನಿಜವಾಗಿ ನಡೆದ ವಿಚಾರವನ್ನೇ ಅವರು ಹೇಳಿದ್ದಾರೆ. ನೆರವಿನ ರೂಪದಲ್ಲಿ ಒಂದು ಮೊತ್ತವನ್ನು ನೀಡಲಾಗಿದ್ದು, ಅದು ಸಣ್ಣ ಮೊತ್ತವೇನಲ್ಲ. ಇಲ್ಲಿ ನಾವು ಚಾಣಕ್ಯನ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಮಸ್ಯೆಯನ್ನು ಮೂಲದಿಂದಲೇ ತೊಲಗಿಸಬೇಕು. ವಿದೇಶಿ ಹಸ್ತಕ್ಷೇಪಕ್ಕೆ ನೆರವು ನೀಡಿದವರು ಯಾರು ಎಂಬುದನ್ನು ಪತ್ತೆಹಚ್ಚಬೇಕು' ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯನ್ನು 'ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ಕ್ರೂರ ದಾಳಿ' ಎಂದು ಬಣ್ಣಿಸಿದ ಅವರು, 'ಆ ಶಕ್ತಿಗಳ ವಿರುದ್ಧ ಪ್ರತೀಕಾರ ತೀರಿಸುವುದು' ನಮ್ಮ ಕರ್ತವ್ಯವಾಗಿದೆ ಎಂದರು. 'ನಮ್ಮ ಚುನಾವಣಾ ವ್ಯವಸ್ಥೆಯ ಮೇಲೆ ದಾಳಿ ನಡೆಸಿದವರು ಯಾರೆಂಬುದು ಬಹಿರಂಗವಾಗಬೇಕು. ಇಂತಹ ಸಮಸ್ಯೆಗಳು ತೊಲಗಿದರೆ ಮಾತ್ರ, ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಲು ಸಾಧ್ಯ' ಎಂದಿದ್ದಾರೆ.

ಜೈರಾಮ್‌ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ)ವಾಷಿಂಗ್ಟನ್‌ನಲ್ಲಿ ಸೃಷ್ಟಿಸಿದ ಸುಳ್ಳನ್ನು ಬಿಜೆಪಿಯ ಸುಳ್ಳಿನ ಸೇನೆ ಎಲ್ಲ ಕಡೆ ಹಬ್ಬಿಸಿದೆ. ಸುಳ್ಳು ಈಗ ಸಂಪೂರ್ಣ ಬಯಲಾಗಿದೆ. ಸುಳ್ಳು ಹೇಳಿದವರು ಕ್ಷಮೆ ಕೇಳುವರೇ?ಗೌರವ್‌ ಭಾಟಿಯಾ ಬಿಜೆಪಿ ರಾಷ್ಟ್ರೀಯ ವಕ್ತಾರಭಾರತವನ್ನು ದುರ್ಬಲಗೊಳಿಸಲು ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿರುವ ರಾಹುಲ್ ಗಾಂಧಿ ಒಬ್ಬ 'ದೇಶದ್ರೋಹಿ'. ಸಂವಿಧಾನ ದೇಶ ಮತ್ತು ಜನರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ.

ನೆರವು ಭಾರತಕ್ಕೆ ಅಲ್ಲ ಬಾಂಗ್ಲಾಕ್ಕೆ'

ಯುಎಸ್‌ಎಐಡಿ ₹182 ಕೋಟಿ ನೆರವನ್ನು ಬಾಂಗ್ಲಾದೇಶಕ್ಕೆ ನೀಡಿದೆಯೇ ಹೊರತು ಭಾರತಕ್ಕಲ್ಲ ಎಂದು ಪತ್ರಿಕೆಯೊಂದು ಕೆಲವು ದಾಖಲೆಗಳನ್ನು ಒದಗಿಸಿ ವರದಿ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಬಿಜೆಪಿ ಮೇಲೆ ಹರಿಹಾಯ್ದಿದ್ದು 'ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕ್ಷಮೆಯಾಚಿಸಬೇಕು' ಎಂದು ಆಗ್ರಹಿಸಿದೆ. 'ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರಗಳನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣಕಾಸಿನ ನೆರವು ಪಡೆದಿದ್ದ ಬಿಜೆಪಿ ಇದೀಗ ಗಮನ ಬೇರೆಡೆ ಸೆಳೆಯಲು ಈ ಸಂಕಥನ ಹೆಣೆದಿದೆ' ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. 'ಅಮೆರಿಕ ನೆರವು ನೀಡಿರುವುದು ಬಾಂಗ್ಲಾದೇಶಕ್ಕೆ ಎಂಬುದನ್ನು ಅಧಿಕೃತ ದಾಖಲೆಗಳು ಸಾಬೀತುಪಡಿಸಿವೆ. ಮೋದಿ ಅವರ ಆತ್ಮೀಯ ಸ್ನೇಹಿತ ಟ್ರಂಪ್‌ ಬಹುಶಃ ಅರಿತೋ ಅಥವಾ ಅರಿಯದೆಯೋ ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಹೇಳಿದ್ದಾರೆ.

'ವಿದೇಶಿ ಹಸ್ತಕ್ಷೇಪ: ಕಳವಳಕಾರಿ'

ದೇಶದಲ್ಲಿನ ಕೆಲವು ಚಟುವಟಿಕೆಗಳಿಗೆ ಯುಎಸ್‌ಎಐಡಿ ಧನಸಹಾಯ ಲಭಿಸಿರುವ ವಿಷಯ ಬಹಿರಂಗಗೊಂಡಿರುವುದು 'ತೀವ್ರ ಆಘಾತ' ಉಂಟುಮಾಡಿದೆ ಮತ್ತು ತನ್ನ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ ಎಂದು ಭಾರತ ಶುಕ್ರವಾರ ಹೇಳಿದೆ. ಅಮೆರಿಕದ ಏಜೆನ್ಸಿಗಳ ಚಟುವಟಿಕೆಗಳು ಮತ್ತು ಹಣಕಾಸಿನ ನೆರವಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ ನೀಡಿರುವ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. 'ಯುಎಸ್‌ಎಐಡಿಗೆ ಸಂಬಂಧಿಸಿದಂತೆ ಅಮೆರಿಕವು ನೀಡಿರುವ ಮಾಹಿತಿಯನ್ನು ನಾವು ಗಮನಿಸಿದ್ದೇವೆ. ಇವು ನಿಸ್ಸಂಶಯವಾಗಿ ಬಹಳ ಕಳವಳದ ವಿಚಾರ' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries