ನವದೆಹಲಿ:ಭಾರತ ಮತ್ತು ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿ ಸೇನಾ ಮುಖ್ಯಸ್ಥರನ್ನು ಉಲ್ಲೇಖಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
'ಸೇನಾ ಮುಖ್ಯಸ್ಥರು ಹೇಳಿದ್ದಾರೆಂದು ರಾಹುಲ್ ಉಲ್ಲೇಖಿಸಿರುವ ಪದಗಳನ್ನು ಸೇನಾ ಮುಖ್ಯಸ್ಥರು ಎಂದೂ ಹೇಳಿಲ್ಲ.
ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ರಾಹುಲ್ ಗಾಂಧಿ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿರುವುದು ವಿಷಾದನೀಯ'ಎಂದು ಅವರು ಹೇಳಿದ್ದಾರೆ.
ಸೋಮವಾರ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿದೆ. ಆದರೆ, ಮೋದಿ ಇದನ್ನು ನಿರಾಕರಿಸಿದ್ದಾರೆ ಎಂದಿದ್ದರು. ಪ್ರಧಾನಿ ಹೇಳಿಕೆಯನ್ನು ಸೇನೆ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು.
ಭಾರತ ಮತ್ತು ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿ ಸೋಮವಾರ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಸುಳ್ಳು. ಗಡಿ ಉದ್ನಿಗ್ನತೆ ಶಮನವಾಗಿ ಉಭಯ ದೇಶಗಳ ಸೇನೆ ಜಮಾವಣೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಮಾಹಿತಿಯನ್ನು ಸರ್ಕಾರ ಸಂಸತ್ತಿನಲ್ಲಿ ಹಂಚಿಕೊಂಡಿದೆ ಎಂದು ಎಂದು ರಾಜನಾಥ್ ಸ್ಪಷ್ಟಪಡಿಸಿದ್ದಾರೆ.
ಚೀನಾ, ಭಾರತದ ಭೂಪ್ರದೇಶ ವಶಪಡಿಸಿಕೊಂಡಿದ್ದರೆ ಅದು 1962ರಲ್ಲೇ ಆಗಿದೆ. ಅಕ್ಸಾಯ್ ಚಿನ್‌ನಲ್ಲಿ 38,000 ಚ.ಕಿ.ಮೀ., ಮತ್ತು 1963ರಲ್ಲಿ 5,180 ಚ.ಕಿ.ಮೀ.ಯನ್ನು ಪಾಕಿಸ್ತಾನ ಅಕ್ರಮವಾಗಿ ಚೀನಾಕ್ಕೆ ಬಿಟ್ಟುಕೊಟ್ಟಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇತಿಹಾಸದ ಈ ಅಂಶಗಳ ಬಗ್ಗೆ ರಾಹುಲ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.