ನವದೆಹಲಿ: ಛತ್ತೀಸಗಢದಲ್ಲಿ ಮೋಸದಿಂದ ಕಲ್ಲಿದ್ದಲು ನಿಕ್ಷೇಪವನ್ನು ಸ್ವಾಧೀನಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಚೆನ್ನೈ ಮೂಲದ ಸಂಸ್ಥೆಯೊಂದರ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು(ಇ.ಡಿ) ₹1,000 ಕೋಟಿ ಮೌಲ್ಯದ ಹಣ ಮತ್ತು ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಆರೋಪ ಎದುರಿಸುತ್ತಿರುವ ಕಂಪನಿ ಆರ್‌ಕೆಎಂ ಪವರ್‌ಜೆನ್ ಪ್ರೈವೇಟ್ ಲಿಮಿಟೆಡ್ (ಆರ್‌ಕೆಎಂಪಿಪಿಎಲ್) ಮತ್ತು ಸಂಬಂಧಿತ ವ್ಯಕ್ತಿಗಳಾದ ಆಂಡಾಲ್ ಅರುಮುಗಂ, ಎಸ್.ಅರುಮುಗಂ ಮತ್ತು ಇತರರ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಇ.ಡಿ ತಿಳಿಸಿದೆ.
ಕಲ್ಲಿದ್ದಲು ಸಚಿವಾಲಯವು ವಿದ್ಯುತ್ ವಲಯಕ್ಕೆ ಮಂಜೂರು ಮಾಡಿದ್ದ ಛತ್ತೀಸಗಢದ ಫತೇಪುರ ಪೂರ್ವ ಕಲ್ಲಿದ್ದಲು ನಿಕ್ಷೇಪವನ್ನು ಮೋಸದ ಮೂಲಕ ಆಕ್ರಮಿಸಿಕೊಂಡ ಆರೋಪದ ಮೇಲೆ ಸಿಬಿಐ ದಾಖಲಿಸಿರುವ ಪ್ರಕರಣ ಆಧರಿಸಿ ಇ.ಡಿ ಪಿಎಂಎಲ್‌ಎ ಪ್ರಕರಣ ದಾಖಲಿಸಿಕೊಂಡಿದೆ.
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಆಧಾರದ ಮೇಲೆ ಆರ್‌ಕೆಎಂಪಿಪಿಎಲ್ ಸಂಸ್ಥೆಯು ಪವರ್ ಫೈನಾನ್ಸ್ ಕಾರ್ಪೊರೇಷನ್‌ನಿಂದ(ಪಿಎಫ್‌ಸಿ) ಸಾಲವನ್ನು ಪಡೆದುಕೊಂಡಿದೆ. ಈ ಸಾಲದ ಹಣದ ಒಂದು ಭಾಗ ₹3,800 ಕೋಟಿಯನ್ನು ಎಂಐಪಿಪಿ ಎಂಬ ವಿದೇಶಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ನಂತರ ಸಂಸ್ಥೆಯು ತನ್ನ ಷೇರುಗಳ ಶೇಕಡ 26ರಷ್ಟನ್ನು ಮಲೇಷ್ಯಾ ಮೂಲದ ಮುದಜಯ ಕಾರ್ಪೊರೇಶನ್‌ಗೆ ಮತ್ತು ಶೇಕಡ 10.95ರಷ್ಟನ್ನು ಎನರ್ಕ್ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಪ್ರತಿ ಷೇರಿಗೆ ₹240 ಪ್ರೀಮಿಯಂನಲ್ಲಿ ವಿತರಿಸಿದೆ ಎಂದು ಇ.ಡಿ ತಿಳಿಸಿದೆ.