ನವದೆಹಲಿ: ಅಮೆರಿಕವು ವಲಸೆ ಕಾನೂನುಗಳನ್ನು ಬಿಗಿಗೊಳಿಸುತ್ತಿದೆ ಎಂದು ಅಮೆರಿಕದ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ. ಕೆಲವು ಅಕ್ರಮ ವಲಸಿಗರನ್ನು ತನ್ನ ವಾಯಪಡೆಯ ವಿಮಾನದ ಮೂಲಕ ಭಾರತಕ್ಕೆ ಗಡೀಪಾರು ಮಾಡುತ್ತಿದೆ ಎಂಬ ವರದಿಗಳ ನಡುವೆಯೇ ಈ ಹೇಳಿಕೆ ನೀಡಿದೆ.
ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸುಮಾರು ಎರಡು ವಾರಗಳ ನಂತರ ಅಕ್ರಮ ವಲಸಿಗರ ಮೊದಲ ತಂಡವನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಟ್ರಂಪ್ ಅವರು ವಲಸೆ ನೀತಿಗೆ ಸಂಬಂಧಿಸಿದ ಹಲವು ಕಾರ್ಯಕಾರಿ ಆದೇಶಗಳಿಗೆ ಈಗಾಗಲೇ ಸಹಿ ಹಾಕಿದ್ದು, ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಕೆಲವು ಅಕ್ರಮ ವಲಸಿಗರನ್ನು ವಿಮಾನದ ಮೂಲಕ ಭಾರತಕ್ಕೆ ಗಡೀಪಾರು ಮಾಡಿರುವ ಬಗ್ಗೆ ಕೇಳಿದಾಗ, ಅಮೆರಿಕದ ರಾಯಭಾರ ಕಚೇರಿಯ ವಕ್ತಾರರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ, ಅಮೆರಿಕವು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುತ್ತಿದೆ ಎಂದಿದ್ದಾರೆ.
'ಆ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ಅಮೆರಿಕವು ತನ್ನ ವಲಸೆ ಕಾನೂನುಗಳನ್ನು ಬಿಗಿಗೊಳಿಸುತ್ತಿದೆ ಮತ್ತು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುತ್ತಿದೆ ಎಂದಷ್ಟೇ ಹೇಳಬಲ್ಲೆ' ಎಂದಿದ್ದಾರೆ.
ಅಕ್ರಮ ವಲಸೆಯನ್ನು ಭಾರತವು ವಿರೋಧಿಸುತ್ತದೆ ಮತ್ತು ಅಮೆರಿಕದಲ್ಲಿ ಭಾರತದ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಿದರೆ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ತಿಂಗಳು ಹೇಳಿತ್ತು.
'ನಮ್ಮೊಂದಿಗೆ ದಾಖಲೆಗಳನ್ನು ಹಂಚಿಕೊಂಡರೆ, ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಬಹುದು. ನಿಜವಾಗಿಯೂ ಭಾರತೀಯರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.