ಕೊಚ್ಚಿ: ಕಾಂಗ್ರೆಸ್‍ಗೆ ತಮ್ಮ ಸೇವೆಗಳು ಅಗತ್ಯವಿಲ್ಲದಿದ್ದರೆ, ಮುಂದೆ ಬೇರೆ ಆಯ್ಕೆಗಳಿವೆ ಎಂಬ ಸಂಸದ ಶಶಿ ತರೂರ್ ಅವರ ಹೇಳಿಕೆಗೆ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಎ.ಕೆ.ಬಾಲನ್ ಪ್ರತಿಕ್ರಿಯಿಸಿದ್ದಾರೆ.
ಶಶಿ ತರೂರ್ ಕಾಂಗ್ರೆಸ್ ಪಾಲಿಗೆ ದುಃಸ್ವಪ್ನ. ಅವನನ್ನು ಮುಟ್ಟಲು ಸಾಧ್ಯವಿಲ್ಲ. ಅದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಬಾಲನ್ ಸ್ಪಷ್ಟಪಡಿಸಿರುವರು.
ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಂದಾಗಿನಿಂದ ಇದು ಪ್ರಾರಂಭವಾಯಿತು. ಕೇರಳದ ಮುಖ್ಯಮಂತ್ರಿ ಹುದ್ದೆಗೆ ತರೂರ್ ಅವರ ಹೆಸರನ್ನು ಹೈಕಮಾಂಡ್ ಸೂಚಿಸಿದರೆ ಏನಾಗಬಹುದು ಎಂದಾಗ ಇತರ ಕಾಂಗ್ರೆಸ್ ನಾಯಕರು ನಿದ್ದೆಗೆಡುತ್ತಿದ್ದಾರೆ. ಜ್ಞಾನವಿರುವ ಯಾರೂ ಕಾಂಗ್ರೆಸ್‍ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಎ.ಕೆ. ಬಾಲನ್ ಲೇವಡಿಗೈದರು.
ಪಕ್ಷದ ನೆಲೆಯನ್ನು ಅಭಿವೃದ್ಧಿಪಡಿಸದಿದ್ದರೆ, ಮೂರನೇ ಅವಧಿಗೆ ವಿರೋಧ ಪಕ್ಷದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ ಎಂಬುದೂ ಸೇರಿದಂತೆ ತರೂರ್ ಅವರ ಹೇಳಿಕೆಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. "ನಾಯಕರ ಅನುಪಸ್ಥಿತಿಯೂ ಪಕ್ಷಕ್ಕೆ ಹಿನ್ನಡೆಯಾಗಿದೆ." ದೇಶ ಮತ್ತು ರಾಜ್ಯದ ಅಭಿವೃದ್ಧಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೆ ತನಗೆ ಸಾರ್ವಜನಿಕ ಬೆಂಬಲವಿದೆ. ಕಾಂಗ್ರೆಸ್ ತನ್ನ ಸೇವೆಗಳನ್ನು ಬಯಸದಿದ್ದರೆ, ತನಗೆ ಬೇರೆ ಆಯ್ಕೆಗಳಿವೆ ಎಂದು ಶಶಿ ತರೂರ್ ಹೇಳಿದ್ದರು.
ಎಲ್‍ಡಿಎಫ್ ಸರ್ಕಾರದ ಕೈಗಾರಿಕಾ ನೀತಿಯನ್ನು ಹೊಗಳಿದ ತಮ್ಮ ಲೇಖನದ ವಿವಾದ ಬಗೆಹರಿಯುವ ಮೊದಲೇ ತರೂರ್ ಹೊಸ ಹೇಳಿಕೆಗಳೊಂದಿಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.






