HEALTH TIPS

ನಂಬಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಬಲ ನಿರಂತರವಾಗಿರಬೇಕು-ಎಡನೀರು ಮಠಾಧೀಶ: ನಾರಂಪಾಡಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ

ಮುಳ್ಳೇರಿಯ: ಧರ್ಮ, ಆಚರಣೆ ಉಳಿಯಲು ನಂಬಿಕೆ ಗಟ್ಟಿಯಾಗಿರಬೇಕು. ಪಕ್ಷ, ಮತಗಳು ಯಾವುದಿದ್ದರೂ ಸನಾತನ ನಂಬಿಕೆಗಳನ್ನು ಬಲಪಡಿಸುವ ನಿಟ್ಟಿನ ಎಲ್ಲಾ ಚಟುವಟಿಕೆಗಳಿಗೂ ಬೆಂಬಲ ನಿರಂತರವಾಗಿರಬೇಕು. ಭಾರತದ ಪ್ರಾಚೀನ ಪರಂಪರೆ, ವೇದ ಉಪನಿಷತ್ತುಗಳು ಸರ್ವರ ಒಳಿತನ್ನು ಸಾರುತ್ತಾ ಧರ್ಮರಕ್ಷಣೆಯ ಉಲ್ಲೇಖಗಳನ್ನು ಮಾಡಿರುವುದು ಇಲ್ಲಿಯ ಸತ್ಯ ಸತ್ವಗಳ ಸಂಕೇತ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು.

ನೆಕ್ರಾಜೆ ಗ್ರಾಮದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಆರಂಭಗೊಂಡಿರುವ ಪುನ: ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಎರಡನೇ ದಿನವಾದ ಸೋಮವಾರತ ಬೆಳಿಗ್ಗೆ ಉಮಾಮಹೇಶ್ವರ ಸಭಾ ಭವನದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.


ವಿವಾಹಾದಿ ಸಂಸ್ಕಾರಗಳ ಶೀಘ್ರ ಪ್ರಾಪ್ತಿಗೆ ಕಾರಣೀಕದಿಂದ ಶೋಭಿಸುತ್ತಿರುವ ಉಮಾಮಹೇಶ್ವರ ಸನ್ನಿಧಿ ಪುನರ್ ನವೀಕರಣಗೊಂಡಿರುವುದು ಸಂತಸ ತಂದಿದೆ. ಜ್ಯೋತಿಷ್ಯ ವಿಜ್ಞಾನದ ಮೂಲಕ ಇಲ್ಲಿಯ ಸಾನ್ನಿಧ್ಯ ಲೋಪಗಳನ್ನು ಅರ್ಥೈಸಿ ನಡೆಸುತ್ತಿರುವ ಬ್ರಹ್ಮಕಲಶ ವಿಧಿವಿಧಾನಗಳು ನಮ್ಮ ಲೌಕಿಕ ಬದುಕಿನ ಜಂಜಡಗಳಿಂದ ಪಾರಾಗಿ ನೆಮ್ಮದಿಯಿಂದ ಬದುಕುವ ಸತ್ವವನ್ನು ನೀಡಲಿ ಎಂದು ಶ್ರೀಗಳು ಕರೆನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಹಿಂದೂ ಸಮಾಜ ಹೆಚ್ಚು ಕ್ರಿಯಾತ್ಮಕವಾಗಿ ಎಚ್ಚೆತ್ತುಕೊಳ್ಳುವ ಕಾಲಘಟ್ಟವಾದ ಇಂದು ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳ ಪುನರುತ್ಥಾನಕ್ಕೆ ಅಹರ್ನಿಶಿ ಶ್ರಮಿಸುತ್ತಿರುವುದು ಸ್ತುತ್ಯರ್ಹವಾದುದು. ಸಂಪೂರ್ಣ ಸಮರ್ಪಣೆಯಿಂದ ನಾವು ನಡೆಸುವ ಸತ್ಕರ್ಮಗಳು ನಮ್ಮ ಭವಿಷ್ಯದ ಸಮರ್ಥ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಉದಾಹರಣೆ ಸಹಿತ ವಿವರಿಸಿದರು.


ಧಾರ್ಮಿಕ ಮುಂದಾಳು, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಪ್ರತಿಯೊಂದು ಧಾರ್ಮಿಕ ಕೇಂದ್ರಗಳಲ್ಲಿ ನಮ್ಮ ಅಂತರಂಗವನ್ನು ಬೆಸೆಯುವ ಸನ್ನಿವೇಶಗಳು ಉತ್ಪನ್ನವಾಗುತ್ತದೆ. ಪ್ರತಿಯೊಬ್ಬರೂ ಧಾರ್ಮಿಕ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಕೈಲಾದ ನೆರವನ್ನು ನೀಡುವ ಮೂಲಕ ಕೃತಾಥರ್ತೆ ಪಡೆಯಬೇಕು ಎಂದು ತಿಳಿಸಿದರು


.

ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ದಿವ್ಯ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಕ್ಷೇತ್ರದ ದೈವಜ್ಞ ನಾಗೇಂದ್ರ ಭಾರಧ್ವಾಜ್ ಕೆ.ಸಿ.ಸುರತ್ಕಲ್, ಮಧೂರು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಜಯದೇವ ಖಂಡಿಗೆ, ನೆಕ್ರಾಜೆ ಶ್ರೀಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ವಿ.ಡಿ.ಶೆಟ್ಟಿ, ಉದ್ಯಮಿ ಶಿವಶಂಕರ ನೆಕ್ರಾಜೆ, ಉದ್ಯಮಿ ಹರೀಶ್ ಪುತ್ರಕಳ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ಉಪಾಧ್ಯಕ್ಷ ವಸಂತ ಪೊಡಿಪ್ಪಳ್ಳ, ರವಿಶಂಕರ ಪುಣಿಚಿತ್ತಾಯ ಪುಂಡೂರು, ಶಿವದಾಸ್ ರೈ ನಾರಂಪಾಡಿ, ಶ್ರೀಧರ ಶೆಟ್ಟಿ ಮುಟ್ಟಂ, ಸ್ವಾಗತ ಸಮಿತಿ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.  ಬ್ರಹ್ಮಕಲಶಾಭಿಷೇಕ ಸಮಿತಿ ಪ್ರ.ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ರಾವ್ ಪಿಲಿಕೂಡ್ಲು ವಂದಿಸಿದರು. ಗಂಗಾಧರ ರೈ ಮಠದಮೂಲೆ ನಿರೂಪಿಸಿದರು. 

  ಬೆಳಿಗ್ಗೆ 5.30ಕ್ಕೆ ಗಣಪತಿಹೋಮ ಸಹಿತ ವಿವಿಧ ವಿಧಿವಿಧಾನಗಳು, ಭಜನಾ ಸಂಕೀರ್ತನೆ, ಸಾಂಸ್ಕøತಿಕ ಕಾರ್ಯಕ್ರಮ ಅಂಗವಾಗಿ ಕುಮಾರಮಂಗಲದ ಸಾರಂಗ ಸಂಗೀತ ಶಾಲೆಯ ಸರಸ್ವತಿ ಕೃಷ್ಣನ್ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಸಂಜೆ ಬಜಕ್ಕೂಡ್ಲು ಗಣೇಶ ಶೆಟ್ಟಿ ಬಳಗದವರಿಂದ ಭಕ್ತಿಸಂಗೀತ, ಸಂಜೆ 6 ರಿಂದ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.


ಇಂದಿನ ಕಾರ್ಯಕ್ರಮ: 

ಬೆಳಿಗ್ಗೆ 6 ರಿಂದ ಗಣಪತಿಹೋಮ, ವಿವಿಧ ಶಾಂತಿಹೋಮಗಳು, 12.30

ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ, ತ್ರಿಕಾಲಪೂಜೆ, ಅನುಜ್ಞಾ ಕಲಶಪೂಜೆ, ಅಧಿವಾಸ ಹೋಮಗಳು, ಮಹಾಪೂಜೆ, ರಾತ್ರಿ ಪೂಜೆ ನಡೆಯಲಿದೆ. ಭಜನಾ ಮಂಟಪದಲ್ಲಿ ಬೆಳಿಗ್ಗೆ 8 ರಿಂದ ಭಜನಾ ಸಂಕೀರ್ತನೆ, 11.30ರಿಂದ 1.30ರ ವರೆಗೆ ಕುರುಂಬುಡೇಲು ಮಹಾಲಿಂಗ ಭಟ್ ಬೆಳ್ಳಾರೆ ಮತ್ತು ತಂಡದವರಿಂದ ನಾರಾಯಣೀಯಂ ಪಾರಾಯಣ, ಸಾಂಸ್ಕøತಿಕ ವೇದಿಕೆಯಲ್ಲಿ ಬೆಳಿಗ್ಗೆ 9.30ರಿಂದ ಸುಧಾಕರ ಕೋಟೆಕುಂಜತ್ತಾಯರಿಂದ ಹರಿಕಥಾ ಸಂಕೀರ್ತನೆ, ಅಪರಾಹ್ನ 1 ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4 ರಿಂದ ಕೈಕೊಟ್ಟಿಕಳಿ ಮತ್ತು ಸಂಘನೃತ್ಯ, ರಾತ್ರಿ 8 ರಿಂದ ವಿದುಷಿಃ ಡಾ.ವಿದ್ಯಾಲಕ್ಷ್ಮಿ ಬೇಳ ಅವರ ಶಿಷ್ಯವೃಂದದವರಿಂದ ನೃತ್ಯ ವೈಭವ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries