ಬದಿಯಡ್ಕ: ಶಿವರಾತ್ರಿಯ ಶುಭದಿನದಂದು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ ಜೀರ್ಣೋದ್ಧಾರ ಮಾತೃ ಸಮಿತಿಯ ನೇತೃತ್ವದಲ್ಲಿ ಶಿವಪಂಚಾಕ್ಷರಿ ಜಪಲಿಪಿ ಅಭಿಯಾನ ಪುಸ್ತಕ ಬಿಡುಗಡೆ ಸಮಾರಂಭ ಬುಧವಾರ ಶ್ರೀ ಉದನೇಶ್ವರ ಸಭಾ ಭವನದಲ್ಲಿ ಜರಗಿತು. ಮಾತೃಸಮಿತಿ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಸರಗೋಡು ಗ್ರಾನೈಟ್ ಉದ್ಯಮಿ ಬಿಂದು ಜಯದಾಸ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಶಿವರಾತ್ರಿಯಂದೇ ಜಪಲಿಪಿ ಯಜ್ಞಕ್ಕೆ ಚಾಲನೆ ದೊರೆತಿರುವುದು ಸಂತೋಷದ ವಿಚಾರವಾಗಿದೆ. ಲಿಪಿಯನ್ನು ಬರೆಯುವುದರಿಂದ ಮಾನಸಿಕವಾಗಿಯೂ, ಶಾರೀರಿಕವಾಗಿಯೂ ನಾವು ದೇವರ ಹತ್ತಿರ ತಲುಪುತ್ತೇವೆ. ಮನೆಯ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆಯಿತ್ತರು.
ಡಾ. ಕವಿತಾ ಶೆಟ್ಟಿ ಕಂಡೆತ್ತೋಡಿ ಮಂಗಳೂರು, ಕೆನರಾ ಬ್ಯಾಂಕ್ ಉದ್ಯೋಗಿ ಪ್ರಮೀಳಾ ಕೆ.ಎನ್., ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ, ಪ್ರಧಾನ ಕಾರ್ಯದರ್ಶಿ ಪಿ.ಜಿ.ಜಗನ್ನಾಥ ರೈ, ಸಂಗೀತ ಶಾಲಾ ನಿರ್ದೇಶಕಿ ಅಶ್ವಿನಿ ರಾಜ್ ಪಟ್ಟಾಜೆ, ಮಧುಶ್ರೀ ಅಳಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಶ್ರೀ ಕ್ಷೇತ್ರ ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈಪೆರಡಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತೃಸಮಿತಿ ಉಪಾಧ್ಯಕ್ಷೆ ವಿನಯ ಜೆ.ರೈ ಪೆರಡಾಲ ಸ್ವಾಗತಿಸಿ, ಮಾತೃಸಮಿತಿ ಕಾರ್ಯದರ್ಶಿ ಗೀತಾ ಎಂ.ಭಟ್ ವಂದಿಸಿದರು. ಜೊತೆಕಾರ್ಯದರ್ಶಿ ಅನಿತಾ ಟೀಚರ್ ಬದಿಯಡ್ಕ ಕಾರ್ಯಕ್ರಮ ನಿರೂಪಿಸಿದರು.




