ಬದಿಯಡ್ಕ: ಏತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ಮಂಗಳವಾರದಿಂದ ಮೊದಲ್ಗೊಂಡು ಬ್ರಹ್ಮಕಲಶದ ವಿಧಿವಿಧಾನಗಳು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಗುರುವಾರ ಬೆಳಿಗ್ಗೆ 6 ರಿಂದ ಗಣಪತಿಹೋಮ, ಶಾಂತಿಹೋಮಗಳು, ದಹನಪ್ರಾಯಶ್ಚಿತ್ತ, ತ್ರಿಕಾಲಪೂಜೆ, ಮಧ್ಯಾಹ್ನ 12 ಕ್ಕೆ ಅಂಕುರಪೂಜೆ, ಮಹಾಪೂಜೆ ನಡೆಯಿತು.
ಭಜನಾರ್ಪಣಮ್-ಸಾಮಗಾನಪ್ರಿಯ ವೇದಿಕೆಯಲ್ಲಿ ಬೆಳಿಗ್ಗೆ 8.30ರಿಂದ ಶಾಸ್ತಾರ ಭಜನಾ ಸಂಘ ಗಿರಿಪುರ, ಚೀರುಂಬಾ ಭಗವತಿ ಭಜನಾ ಸಂಘ ಪೊಡಿಪ್ಪಳ್ಳ, ರಾಮಚಂದ್ರ ಭಟ್ ವೃಂದಾವನ ಪೆರ್ಲ, ಬನಾರಿ ಶ್ರೀಗೋಪಾಲಕೃಷ್ಣ ಭಜನಾ ಸಂಘ ದೇಲಂಪಾಡಿ, ಶ್ರೀರಾಮಾಂಜನೇಯ ಭಜನಾ ಸಂಘ ಕುದಿಂಗಿಲ, ಶ್ರೀಧರ್ಮಶಾಸ್ತಾ ಭಜನಾ ಸಂಘ ಎ.ಸಿ.ಸರ್ಕಲ್ ಕುರುಮುಜ್ಜಿಕಟ್ಟೆ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಕಲಾರ್ಪಣಮ್-ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ 10.30ರಿಂದ ನಾರಾಯಣೀಯಂ ಸ್ತೋತ್ರ ಪಠಣ ಹಾಗೂ ವ್ಯಾಖ್ಯಾನ, ಸಂಜೆ 5 ರಿಂದ ಶಂ.ನಾ.ಅಡಿಗ ಕುಂಬಳೆ ಅವರ ಕೀರ್ತನ ಕುಟೀರದ ವಿದ್ಯಾರ್ಥಿಗಳಾದ ಅಭಿಜ್ಞಾ ಬೊಳುಂಬು ಮತ್ತು ತಂಡದವರಿಂದ ಹರಿಕಥಾ ಸತ್ಸಂಗ, ಅಗಲ್ಪಾಡಿ ಜಯನಗರದ ಶ್ರೀಪಾಂಚಜನ್ಯ ಬಾಲಗೋಕುಲ ತಂಡದವರಿಂದ ಕುಣಿತ ಭಜನೆ, ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನಾಟ್ಯ ಸಂಕಲ್ಪ ನಡೆಯಿತು.
ಗ್ರಾಮೀಣ ಪ್ರದೇಶವಾಗಿ, ಕನಿಷ್ಠ ಸೌಕರ್ಯಗಳಷ್ಟೇ ಲಭ್ಯವಿರುವ ಏತಡ್ಕ ಪರಿಸರದ ಈ ದೇವಾಲಯದ ಪುನಃಪ್ರತಿಷ್ಠಾ ಕಾರ್ಯಕ್ರಮಗಳು ವಿವಿಧ ಕಾರ್ಯಕ್ರಮಗಳ ಕಾರಣ ಜನರನ್ನು ಸೆಳೆಯುತ್ತಿದೆ. ಸ್ಥಳೀಯರಷ್ಟೇ ಅಲ್ಲದೆ ದೂರದೂರುಗಳಿಂದಲೂ ಜನರು ಆಗಮಿಸುತ್ತಿದ್ದು, ಪ್ರಕೃತಿ ರಮಣೀಯವಾದ ಹಸಿರು ಅಡಿಕೆ-ತೆಂಗಿನ ತೋಟಗಳ ಮಧ್ಯೆ ಕಂಗೊಳಿಸುವ ಶ್ರೀಕ್ಷೇತ್ರ ಭಜಕರಿಗೆ ಆಧ್ಯಾತ್ಮಿಕ ಅನುಭೂತಿ ನೀಡುವಲ್ಲಿ ಯಶಸ್ವಿಯಾಗಿದೆ.
ಇಂದಿನ ಕಾರ್ಯಕ್ರಮ(ಶುಕ್ರವಾರ):
ಬೆಳಿಗ್ಗೆ 6 ರಿಂದ ಗಣಪತಿ ಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶಾಭಿಷೇಕ,ಅನುಜ್ಞಾ ಕಲಶಾಭಿಷೇಕ, ತ್ರಿಕಾಲ ಪೂಜೆ, ಮಧ್ಯಾಹ್ನ 12 ರಿಂದ ಅಂಕುರಪೂಜೆ, ಮಹಾಪೂಜೆ, ಸಂಜೆ 7 ರಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನ ಅನುಜ್ಞಾ ಪ್ರಾರ್ಧನೆ, ಬಿಂಬಶುದ್ಧಿ, ಕಲಶಪೂಜೆ, ಅಂಕುರಪೂಜೆ, ಮಹಾಪೂಜೆ ನಡೆಯಲಿದೆ.
ಭಜನಾರ್ಪಣಮ್-ಸಾಮಗಾನಪ್ರಿಯ ವೇದಿಕೆಯಲ್ಲಿ ವಿವಿಧ ತಂಡಗಳಿಂದ ಭಜನೆ, ಕಲಾರ್ಪಣಮ್-ನಟರಾಜ ವೇದಿಕೆಯಲ್ಲಿ ಮಧ್ಯಾಹ್ನ 12 ರಿಂದ 1ರ ವರೆಗೆ ದಾಸ ಸಂಕೀರ್ತನೆ, ಸಂಜೆ 5 ರಿಂದ 6.30ರ ವರೆಗೆ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದವರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ, 6.30ರಿಂದ 7.30ರ ವರೆಗೆ ವಿದುಷಿಃ ಡಾ.ಶಾರದಾ ಸ್ಪೂರ್ತಿ ವೈ ಅವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, 7.30ರಿಂದ 10.30ರ ವರೆಗೆ ಬಾಯಾರು ಮಹಮ್ಮಾಯಿ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ ಪ್ರದರ್ಶನಗೊಳ್ಳಲಿದೆ.

.jpg)

