ತಿರುಚಿರಾಪಲ್ಲಿ: 'ಪೂಜಾರಿಯಾಗಲು ಇಚ್ಛಿಸುವ ಹಿಂದೂ ಧರ್ಮದ ಎಲ್ಲ ಜಾತಿಯವರಿಗೆ ತರಬೇತಿ ನೀಡುವ ಸರ್ಕಾರದ ಯೋಜನೆಯಡಿ 2021ರಲ್ಲಿ ನಾವು 'ಕುಮಾರವಯಲೂರ್ ಅರುಳ್‌ಮಿಗು ಸುಬ್ರಮಣ್ಯ' ದೇವಸ್ಥಾನಕ್ಕೆ ನೇಮಕಗೊಂಡಿದ್ದೇವೆ. ಆದರೆ, ಗರ್ಭಗುಡಿಯೊಳಗೆ ಹೋಗಲು ನಮಗೆ ಅವಕಾಶ ನಿರಾಕರಿಸಲಾಗಿದೆ' ಎಂದು ಬ್ರಾಹ್ಮಣೇತರ ಇಬ್ಬರು ಪೂಜಾರಿಗಳು ಆರೋಪಿಸಿದ್ದಾರೆ.
'ಫೆ.19ರಿಂದ ದೇವಾಲಯದಲ್ಲಿ ಕುಂಭಾಭೀಷೇಕ ನಡೆಯಲಿದೆ. ಇದಕ್ಕೆ ಸಂಬಂಧಿಸಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು ಎಂಬ ಆಸೆ ಇದೆ. ಇದಕ್ಕೆ ನಮಗೆ ಅವಕಾಶ ಕಲ್ಪಿಸಿಕೊಡಬೇಕು' ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿಂದೂ ಧರ್ಮ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ. ಸೇಕರ್ ಬಾಬು ಸೇರಿದಂತೆ ಹಲವು ಅಧಿಕಾರಿಗಳಿಗೆ ಪೂಜಾರಿಗಳಾದ ಪ್ರಭು ಹಾಗೂ ಜಯಪಾಲ್ ಎಂಬುವರು ಮಂಗಳವಾರ ಪತ್ರ ಬರೆದಿದ್ದಾರೆ.
'ನೇಮಕಗೊಂಡಾಗಿನಿಂದಲೂ ಗಣೇಶ ಮತ್ತು ನವಗ್ರಹ ದೇವಸ್ಥಾನದಲ್ಲಿ ಮಾತ್ರವೇ ಪೂಜೆ ಮಾಡಲು ಅವಕಾಶ ನೀಡಲಾಗುತ್ತಿದೆ. ಮುರುಗನ್ ದೇವಸ್ಥಾನದ ಗರ್ಭಗುಡಿಯೊಳಗೆ ಒಮ್ಮೆಯೂ ನಮ್ಮನ್ನು ಬಿಟ್ಟುಕೊಂಡಿಲ್ಲ ಮತ್ತು ದೇವರಿಗೆ ಪೂಜೆ ಮಾಡುವ ಅವಕಾಶವನ್ನೂ ನೀಡಿಲ್ಲ' ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
'ಭಕ್ತರು ನಮಗೆ ಗೌರವ ನೀಡುತ್ತಾರೆ. ಯಾವುದೇ ರೀತಿಯಲ್ಲೂ ನಮ್ಮ ವಿಷಯದಲ್ಲಿ ಭಕ್ತರು ತಾರತಮ್ಯ ಮಾಡುವುದಿಲ್ಲ. ಆದರೆ, ಸಿವಾಚಾರ್ಯರು ಗರ್ಭಗುಡಿಯೊಳಗೆ ಹೋಗದಂತೆ ನಮ್ಮನ್ನು ತಡೆಯುತ್ತಾರೆ' ಎಂದಿದ್ದಾರೆ. ಈ ಬಗ್ಗೆ ಪ್ರಕ್ರಿಯೆ ಪಡೆಯಲು ಸಿವಾರ್ಚಾರರು ಸಂಪರ್ಕಕ್ಕೆ ಸಿಗಲಿಲ್ಲ.






