ನವದೆಹಲಿ: ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ನಗರ ದ್ವಾರಕೆಯ ಕುರಿತು ಮಾಹಿತಿ ತಿಳಿಯಲು ಮಹಿಳಾ ಸದಸ್ಯರು ಸೇರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಐವರು ತಜ್ಞರ ತಂಡ ಗುಜರಾತ್‌ನ ದ್ವಾರಕಾ ಕರಾವಳಿಯಲ್ಲಿ ನೀರಿನೊಳಗೆ ಅನ್ವೇಷಣೆ ಆರಂಭಿಸಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಈ ಶೋಧ ಕಾರ್ಯಾಚರಣೆಯು ಭಾರತದಲ್ಲಿ ನೀರಿನ ಆಳದಲ್ಲಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಧ್ಯೇಯದ ಮಹತ್ವದ ಹೆಜ್ಜೆಯಾಗಿದೆ. ಇದು ಎಎಸ್‌ಐನ ನವೀಕೃತ ಅಂಡರ್‌ವಾಟರ್ ಆರ್ಕಿಯಾಲಜಿ ವಿಂಗ್‌ನ ಭಾಗವಾಗಿದೆ. ಇದನ್ನು ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿನ ಕಡಲಿನಲ್ಲಿ ಸಮೀಕ್ಷೆ ಮತ್ತು ಶೋಧ ಕೈಗೊಳ್ಳಲು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಎಎಸ್‌ಐ ಮೊದಲ ಬಾರಿಗೆ ಹೆಚ್ಚು ಮಹಿಳಾ ಪುರಾತತ್ವ ಶಾಸ್ತ್ರಜ್ಞರನ್ನು ಒಳಗೊಂಡಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪುರಾತತ್ವ ಶಾಸ್ತ್ರಜ್ಞರು ನೀರೊಳಗಿನ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ ಎಂದೂ ಅದು ತಿಳಿಸಿದೆ.

