HEALTH TIPS

ಯುಜಿಸಿ ಕರಡು ನಿಯಮಗಳು: ಆರೆಸ್ಸೆಸ್‌ ಕಾರ್ಯಸೂಚಿ ಹೇರುವ ಯತ್ನ; ರಾಹುಲ್‌ ಕಿಡಿ

 ನವದೆಹಲಿ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ, ಕುಲಪತಿಗಳು ಮತ್ತು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಯುಜಿಸಿ ಕರಡು ನಿಯಮಗಳು ಆರೆಸ್ಸೆಸ್‌ನ 'ಒಂದೇ ಇತಿಹಾಸ, ಒಂದೇ ಸಂಪ್ರದಾಯ, ಒಂದೇ ಭಾಷೆ' ಕಾರ್ಯಸೂಚಿಯನ್ನು ದೇಶದಲ್ಲಿ ಹೇರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಆರೋಪಿಸಿದರು.

ಯುಜಿಸಿ ಕರಡು ವಿರೋಧಿಸಿ ಡಿಎಂಕೆ ವಿದ್ಯಾರ್ಥಿ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೆಸ್ಸೆಸ್‌ ತನ್ನ 'ದಿವಾಳಿ'ಗೊಂಡ ಈ ಸಿದ್ಧಾಂತವನ್ನು ದೇಶದ ಮೇಲೆ ಹೇರಲು ಜನರು ಅವಕಾಶ ನೀಡುವುದಿಲ್ಲ ಎಂದರು.

ಜನ ಬೆಂಬಲವಿರುವ ಎಲ್ಲದರ ಮೇಲೆಯೂ ಆರೆಸ್ಸೆಸ್‌ ದಾಳಿಗೆ ಪ್ರಯತ್ನಿಸುತ್ತಿದೆ. ಇದು ಅದರ ಆರಂಭಿಕ ಹಂತವಾಗಿದ್ದು, ಅದನ್ನು ಸಾಧಿಸಬೇಕೆನ್ನುವುದು ಅದರ ಬಯಕೆಯಾಗಿದೆ. ವಿವಿಧ ರಾಜ್ಯಗಳ ಶಿಕ್ಷಣ ವ್ಯವಸ್ಥೆಯೊಂದಿಗೆ ಅದು ಮಾಡುತ್ತಿರುವ ಈ ಪ್ರಯತ್ನವು ಅದರ ಕಾರ್ಯಸೂಚಿಯನ್ನು ಹೇರುವ ಮತ್ತೊಂದು ಪ್ರಯತ್ನವಾಗಿದೆ. ಅದಕ್ಕಾಗಿಯೇ, ಅದು ಸಂವಿಧಾನದ ಮೇಲೂ ದಾಳಿ ಮಾಡುತ್ತಿದೆ ಎಂದು ಕಿಡಿಕಾರಿದರು.

'ತಮಿಳು ಜನರು ತಮ್ಮದೇ ಆದ ಇತಿಹಾಸ, ಭಾಷೆ, ಸಂಪ್ರದಾಯ ಹೊಂದಿದ್ದಾರೆ. ಅವರಿಗೆ ಹೋರಾಟಗಳ ಇತಿಹಾಸವಿದೆ. ಯುಜಿಸಿಯ ಹೊಸ ಕರಡು ನಿಯಮಗಳನ್ನು ಮತ್ತು ಆರೆಸ್ಸೆಸ್‌ನ ಅಧಿಪತ್ಯ ಹೇರುವುದು ಆ ಜನರಿಗೆ ಮತ್ತು ಉಳಿದ ರಾಜ್ಯಗಳಿಗೂ ಮಾಡುವ ಅವಮಾನ. ಸಂವಿಧಾನದ ಮೇಲೆ ದಾಳಿ ಮಾಡುವುದು ಅಸಾಧ್ಯವೆಂದು ಆರೆಸ್ಸೆಸ್‌ಗೆ ಮನವರಿಕೆ ಮಾಡಲು ಈ ರೀತಿಯ ಅನೇಕ ಪ್ರತಿಭಟನೆಗಳು ನಡೆಯಬೇಕಿದೆ. ಆಗ ನಮ್ಮ ರಾಜ್ಯಗಳ ಮೇಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಇತಿಹಾಸಗಳ ಮೇಲೆ ಅವರಿಗೆ ದಾಳಿ ಮಾಡಲು ಸಾಧ್ಯವಾಗದು' ಎಂದು ರಾಹುಲ್‌ ಅಭಿಪ್ರಾಯಪಟ್ಟರು.

ಪ್ರತಿಭಟನೆ ಬೆಂಬಲಿಸಿ ಪಾಲ್ಗೊಂಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ನಡೆಸಿ, 'ಎನ್‌ಇಪಿ ಎನ್ನುವುದು ವಿಶ್ವವಿದ್ಯಾನಿಲಯಗಳನ್ನು ಕೈಗಾರಿಕೋದ್ಯಮಿಗಳಿಗೆ ವಹಿಸುವ ಪಿತೂರಿ. ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದ ಎಲ್ಲ ಅಧಿಕಾರಗಳ ಸ್ವಾಧೀನ ಬಯಸುತ್ತಿದೆ. ರಾಜಕಾರಣಿಗಳನ್ನು ಕೈಗಾರಿಕೋದ್ಯಮಿಗಳ ಸೇವಕರನ್ನಾಗಿ ಮಾಡಲು ಬಯಸುತ್ತಿದೆ. ನಾವು ಎಂದಿಗೂ ಎನ್‌ಇಪಿಯನ್ನು ಬೆಂಬಲಿಸುವುದಿಲ್ಲ' ಎಂದು ಅಖಿಲೇಶ್‌ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries