ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಭಗವತಿ ಅನ್ನಪೂರ್ಣೆಯ ಪ್ರಾಣಪ್ರತಿಷ್ಠಾ ಮಹಾ ಕುಂಭಾಭಿಷೇಕವನ್ನು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಮಹಾ ಸ್ವಾಮೀಜಿ ಅವರು ಶುಕ್ರವಾರ ನೆರವೇರಿಸಿದರು. ಈ ದೇಗುಲವು ವಾರಾಣಸಿಯ ಪ್ರಸಿದ್ಧ ವಿಶ್ವನಾಥ ದೇಗುಲದ ಸಮೀಪ ಇದೆ.
ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಪುರಾತನ ನಗರದ ಎಲ್ಲೆಡೆ ಮಂತ್ರಘೋಷಗಳು ಪ್ರತಿಧ್ವನಿಸುತ್ತಿದ್ದವು.
ಸಮಾರಂಭದಲ್ಲಿ ಶೃಂಗೇರಿ ಮಠದ ವತಿಯಿಂದ ಸ್ವರ್ಣ ಶಿಖರ ಗೋಪುರವನ್ನು ಅನ್ನಪೂರ್ಣೇಶ್ವರಿಗೆ ಸಮರ್ಪಿಸಲಾಯಿತು. ವಿಧುಶೇಖರ ಭಾರತಿ ಮಹಾ ಸ್ವಾಮೀಜಿ ಅವರು ಅನ್ನಪೂರ್ಣೇಶ್ವರಿ ಗರ್ಭಗುಡಿಯ ಸ್ವರ್ಣ ಶಿಖರ ಗೋಪುರಕ್ಕೆ ಕುಂಭಾಭಿಷೇಕ ಮಾಡಿದರು.
ಕುಂಭಾಭಿಷೇಕದ ಭಾಗವಾಗಿ ಸಹಸ್ರಚಂಡಿ ಮಹಾಯಜ್ಞ, ಕೋಟಿಕುಂಕುಮಾರ್ಚನೆ, ಮಹಾರುದ್ರ ಯಜ್ಞ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ನಾಲ್ಕು ವೇದಗಳು ಮತ್ತು 18 ಪುರಾಣಗಳು ಮತ್ತು ವಾಲ್ಮೀಕಿ ರಾಮಾಯಣದ ಪಾರಾಯಣ ಸಹ ನಡೆಯಿತು. ಜನವರಿ 31ರಂದು ಆರಂಭಗೊಂಡು ಫೆಬ್ರುವರಿ 9ರವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 500 ವೇದ ವಿದ್ವಾಂಸರು ಪಾಲ್ಗೊಂಡಿದ್ದಾರೆ.






