ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡುವ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ಸುಳ್ಳು ಮತ್ತು ವಂಚನೆ ರಾಜಕೀಯವನ್ನು ಕೊನೆಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯ ಜನರನ್ನು ಶ್ಲಾಘಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ದೆಹಲಿಯ ಮತದಾರರು ಕೇಜ್ರಿವಾಲ್ ಅವರ ಶಾರ್ಟ್ ಕಟ್ ರಾಜಕೀಯವನ್ನು ಕೊನೆಗೊಳಿಸಿದ್ದಾರೆ.
ದೆಹಲಿಯ ಅಭಿವೃದ್ಧಿಗೆ ಅಡಚಣೆಯಾಗಿದ್ದ ಎಎಪಿ ಪಕ್ಷವನ್ನು ಅಧಿಕಾರದಿಂದ ದೂರು ಇಟ್ಟಿದ್ದಾರೆ' ತಿಳಿಸಿದ್ದಾರೆ.
'ರಾಜಕಾರಣದಲ್ಲಿ ಸುಳ್ಳು, ಮೋಸಕ್ಕೆ ಸ್ಥಳವಿಲ್ಲ ಎಂಬುದನ್ನು ದೆಹಲಿಯ ಜನಾದೇಶ ಸ್ಪಷ್ಟಪಡಿಸಿದೆ. ಕೇಜ್ರಿವಾಲ್ ಅವರ ಶಾರ್ಟ್ ಕಟ್ ರಾಜಕಾರಣಕ್ಕೆ ಜನರೇ ಶಾರ್ಟ್ ಸರ್ಕ್ಯೂಟ್ ಮಾಡಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
'ಪ್ರತಿಭಟನೆಗಳು, ಘರ್ಷಣೆಗಳು ಮತ್ತು ಆಡಳಿತಾತ್ಮಕ ಅನಿಶ್ಚಿತತೆಯಲ್ಲಿ ಎಎಪಿ ತೊಡಗಿತ್ತು. ದೆಹಲಿಯ ಮಾಲೀಕರಾಗಲು ಹೊರಟವರಿಗೆ (ಎಎಪಿ ನಾಯಕರಿಗೆ) ಜನ ತಕ್ಕ ಪಾಠ ಕಲಿಸಿದ್ದಾರೆ. ದೆಹಲಿಯ ಅಸಲಿ ಮಾಲೀಕರು ದೆಹಲಿಯ ಜನ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ದೆಹಲಿ ಜನರು ಈ ಬಾರಿ ಡಬಲ್ ಎಂಜನ್ ಸರ್ಕಾರಕ್ಕೆ ಭರವಸೆ ಅಡಿಪಾಯ ಹಾಕಿದ್ದಾರೆ. ಹಾಗಾಗಿ ಇಲ್ಲಿನ ಜನರಿಗೆ 'ಉತ್ತಮ ಆಡಳಿತ'ದ ಭರವಸೆ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.
'ಇಷ್ಟು ದಿನ ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರ ಮನದಲ್ಲಿ ನೋವು ಕಾಣಿಸಿಕೊಂಡಿದ್ದು, ದೆಹಲಿಗೆ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವಿತ್ತು. ಆದರೆ, ಇಂದು ದೆಹಲಿ ಜನರು ನಮ್ಮ ಮನವಿಯನ್ನು ಸ್ವೀಕರಿಸಿದ್ದಾರೆ. 21ನೇ ಶತಮಾನದಲ್ಲಿ ಜನಿಸಿದ ಯುವಕರು ದೆಹಲಿಯಲ್ಲಿ ಬಿಜೆಪಿಯ ಉತ್ತಮ ಆಡಳಿತವನ್ನು ಮೊಟ್ಟಮೊದಲ ಬಾರಿಗೆ ನೋಡಲಿದ್ದಾರೆ' ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಈಗ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಗೆ ಜಯ ಸಿಕ್ಕಿದೆ. 2014, 2019, 2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದೇವೆ. ಸತತ ಮೂರು ಬಾರಿ ಎಲ್ಲಾ ಕ್ಷೇತ್ರಗಳಲ್ಲಿನ ಗೆಲುವು ನಮಗೆ ಸ್ಪೂರ್ತಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ದೆಹಲಿಯ ಪೂರ್ವಾಂಚಲ ಪ್ರದೇಶದಲ್ಲಿ ನೆಲೆಸಿರುವ ಉತ್ತರ ಪ್ರದೇಶ ಮತ್ತು ಬಿಹಾರದ ಜನರು ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
'ದೆಹಲಿಯಲ್ಲಿ ಕಮಲ ಅರಳದ ಪ್ರದೇಶವಿಲ್ಲ. ಎಲ್ಲಾ ಭಾಷೆಯ ಜನ ಬಿಜೆಪಿಗೆ ಮತ ಹಾಕಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲಿ ನಾನು ಎಲ್ಲಿಗೆ ಹೋದರೂ ನಾನು ಪೂರ್ವಾಂಚಲದ ಸಂಸದ ಎಂದು ಹೆಮ್ಮೆಯಿಂದ ಹೇಳುತ್ತಿದ್ದೆ. ಪೂರ್ವಾಂಚಲದ ಜನರು ಈ ಬಾಂಧವ್ಯಕ್ಕೆ ಪ್ರೀತಿಯನ್ನು ತೋರಿದ ಎಲ್ಲರಿಗೂ ಧನ್ಯವಾದಗಳು' ಎಂದು ಅವರು ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಭಾರಿ ಬಹುಮತ ಸಾಧಿಸಿದೆ. ಇತ್ತ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಎಎಪಿ ಪಕ್ಷದ ಸಂಸ್ಥಾಪಕ ನಾಯಕರಾದ ಮಾಜಿ ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೋಲು ಅನುಭವಿಸಿದ್ದಾರೆ. ಕಲ್ಕಾಜಿ ಕ್ಷೇತ್ರದಿಂದ ಮುಖ್ಯಮಂತ್ರಿ ಆತಿಶಿ ಗೆಲುವು ಸಾಧಿಸಿದ್ದಾರೆ.






