HEALTH TIPS

By-Election Results: ಈರೋಡ್‌ನಲ್ಲಿ ಡಿಎಂಕೆ, ಮಿಲ್ಕಿಪುರದಲ್ಲಿ ಬಿಜೆಪಿಗೆ ಜಯ

 ಚೆನ್ನೈ: ತಮಿಳುನಾಡಿನ ಈರೋಡ್‌ (ಪೂರ್ವ) ಹಾಗೂ ಉತ್ತರ ಪ್ರದೆಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕ್ರಮವಾಗಿ ಡಿಎಂಕೆ ಹಾಗೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಎರಡೂ ಕ್ಷೇತ್ರಗಳಿಗೆ ಫೆಬ್ರುವರಿ 5ರಂದು ಮತದಾನವಾಗಿತ್ತು.ಈರೋಡ್‌ನಲ್ಲಿ ಡಿಎಂಕೆಯ ವಿ.ಚಿ. ಚಂದ್ರಕುಮಾರ್‌ ಅವರು 91,558 ಮತಗಳ ಅಂತರದಿಂದ ಗೆದ್ದಿದ್ದಾರೆ.

ಅವರು, 1,15,709 ಮತಗಳನ್ನು ಗಳಿಸಿದ್ದಾರೆ. ಅವರ ಸಮೀಪದ ಸ್ಪರ್ಧಿ ನಾಮ್‌ ತಮಿಝಾರ್‌ ಕಚ್ಚಿ (ಎನ್‌ಟಿಕೆ) ಪಕ್ಷದ ಎಂ.ಕೆ. ಸೀತಾಲಕ್ಷ್ಮೀ ಅವರು ಗಳಿಸಿದ್ದು 24,151 ಮತಗಳನ್ನಷ್ಟೇ.

ಈ ಕ್ಷೇತ್ರದ ಶಾಸಕರಾಗಿದ್ದ ಇವಿಕೆಎಸ್‌ ಇಳಾಂಗೋವನ್‌ ಅವರು ಮೃತಪಟ್ಟಿದ್ದರಿಂದ ಉಪಚುನಾವಣೆ ಘೋಷಣೆಯಾಗಿತ್ತು. ಒಟ್ಟು 44 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಹೆಚ್ಚಿನವರು ಪಕ್ಷೇತರರು. 6,109 ಮತದಾರರು ಈ ಚುನಾವಣೆಯಲ್ಲಿ 'ನೋಟಾ' ಒತ್ತಿದ್ದಾರೆ. ಚಂದ್ರಕುಮಾರ್‌ ಹಾಗೂ ಸೀತಾಲಕ್ಷ್ಮೀ ಹೊರತುಪಡಿಸಿ ಉಳಿದ ಯಾವ ಅಭ್ಯರ್ಥಿಯ ಮತ ಗಳಿಕೆಯೂ ಸಾವಿರದ ಗಡಿ ದಾಟಿಲ್ಲ. ಹೀಗಾಗಿ, ಮೂರನೇ ಸ್ಥಾನ ನೋಟಾದ್ದೇ!

ಈ ಗೆಲುವು, ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷಕ್ಕೆ ಹೊಸ ಹುರುಪು ನೀಡಿದೆ.

'ಪಕ್ಷದ ವಿರುದ್ಧ ಸ್ಪರ್ಧಿಸಿದವರು ಪೆರಿಯಾರ್‌ ಭೂಮಿಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಫಲಿತಾಂಶದ ಬಳಿಕ ಟೀಕಿಸಿದ್ದಾರೆ.

ಉತ್ತರ ಪ್ರದೆಶದ ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಮಿಲ್ಕಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಬಾನು ಪಾಸ್ವಾನ್‌ ಅವರು 61,710 ಮತಗಳಿಂದ ಗೆಲುವು ಕಂಡಿದ್ದಾರೆ.

ಪಾಸ್ವಾನ್‌ ಅವರಿಗೆ 1,46,397 ಮತಗಳು ಬಂದಿದ್ದರೆ, ಅವರ ಸಮೀಪದ ಸ್ಪರ್ಧಿ ಸಮಾಜವಾದಿ ಪಕ್ಷದ ಅಜಿತ್‌ ಪ್ರಸಾದ್‌ ಅವರು 84,687 ಮತ ಗಳಿಸಿದ್ದಾರೆ.

ಸಮಾಜವಾದಿ ಪಕ್ಷದ ಅವದೇಶ್‌ ಪ್ರಸಾದ್‌ ಅವರು ಮಿಲ್ಕಿಪುರ ಶಾಸಕರಾಗಿದ್ದರು. ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಫೈಜಾಬಾದ್‌ನಿಂದ ಗೆದ್ದು ಸಂಸತ್‌ ಪ್ರವೇಶಿಸಿದ್ದರಿಂದ, ಉಪ ಚುನಾವಣೆ ನಿಗದಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries