ಬೆಂಗಳೂರು: 'ನೆರೆಯವರು ಮೊದಲು' ಎಂಬ ಭಾರತದ ನೀತಿ ಮತ್ತು 'ಭಾರತ ಮೊದಲು' ಎಂಬ ಶ್ರೀಲಂಕಾದ ನೀತಿ ಎರಡು ದೇಶಗಳು ಉತ್ತಮ ಸಂಬಂಧ ಹೊಂದಲು ಕಾರಣವಾಗಿದೆ. ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವೃದ್ಧಿಗೊಳ್ಳಲು ಪರಿಶೀಲನೆ ನಡೆಯಬೇಕು' ಎಂದು ಮಾಜಿ ಹೈಕಮಿಷನರ್ ಮಿಲಿಂದ ಮೊರಗೊಂಡ ತಿಳಿಸಿದರು.
ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರವು ಸಿಎನ್‌ಎಸ್‌ಎಸ್ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಲಂಕಾದಿಂದ ಭಾರತಕ್ಕೆ ಹೈಕಮಿಷನರ್ ಆಗಿ ನಿಯೋಜನೆಗೊಂಡಿದ್ದ ಮಿಲಿಂದ ಮೊರಗೊಂಡ ಅವರು ಆಗಿನ ಅನುಭವವನ್ನು ಹಂಚಿಕೊಂಡರು. 'ನೇವಿಗೇಟಿಂಗ್ ದ ಟೆರೇನ್ ಆಫ್ ಪಾಲಿಸಿ ಮೇಕಿಂಗ್ ಇನ್ ದ ಏಜ್ ಆಫ್ ಡಿಸ್‌ರಪ್ಶನ್' ವಿಷಯದ ಕುರಿತು ವಿಚಾರ ಮಂಡಿಸಿದರು.
ಸಂಸ್ಥೆಯ ಕುಲಪತಿ ಎಂ.ಆರ್. ಜಯರಾಂ, ಸಿಎನ್‌ಎಸ್‌ಎಸ್‌ನ ಇಂಡಿಯಾ ಸ್ಟ್ರಾಟೆಜಿಕ್ ಸ್ಟಡೀಸ್ ಕಾರ್ಯಕ್ರಮ ಮುಖ್ಯಸ್ಥ ಬಾಲಸುಬ್ರಮಣಿಯನ್, ಸಿಎನ್‌ಎಸ್‌ಎಸ್ ಕೌನ್ಸಿಲ್ ಸದಸ್ಯ ಪಿ.ಎಂ. ಹೆಬ್ಳಿಕರ್ ಭಾಗವಹಿಸಿದ್ದರು.






