ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಕಳಾಯಿಯ ಮನೆಯ ಕಪಾಟಿನಲ್ಲಿರಿಸಿದ್ದ ಏಳು ಪವನು ಚಿನ್ನ ಹಾಗೂ ಒಂದು ಲಕ್ಷ ರೂ. ನಗದು ಕಳವುಗೈಯಲಾಗಿದೆ. ಕಳವುಗೈದ ಚಿನ್ನದ ಬದಲು ಅದೇ ರೀತಿಯ ನಕಲಿ ಆಭರಣ ಇರಿಸಲಾಗಿದೆ.
ಇಲ್ಲಿನ ಕಳಾಯಿ ನಿವಾಸಿ, ಕೃಷಿಕ ಸಂಜೀವ ಶೆಟ್ಟಿ ಅವರ ಮನೆಯಿಂದ ಈ ಕಳವು ನಡೆದಿದೆ. ಮನೆಯಲ್ಲಿ ಸಂಜೀವ ಶೆಟ್ಟಿ ಒಬ್ಬರೇ ಇದ್ದು, ಇವರ ಪುತ್ರ ಅಶೋಕ್ ಕುಮಾರ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಸಂಜೀವ ಶೆಟ್ಟಿ ಅವರಿಗೆ ಸಹಾಯಿಯಾಗಿ ಕರ್ನಾಟಕ ನಿವಾಸಿಯೊಬ್ಬನನ್ನು ಮನೆ ಹಾಗೂ ತೋಟದ ಕೆಲಸಕ್ಕೆ ನೇಮಿಸಲಾಗಿದ್ದು, ಜ. 28ರಂದು ಊರಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದನು. ಈ ಮಧ್ಯೆ ಅಶೋಕ್ ಕುಮಾರ್ ಬೆಂಗಳೂರಿನಿಂದ ಮನೆಗೆ ವಾಪಸಾಗಿ ಕಪಾಟು ತೆರೆದು ನೋಡಿದಾಗ ಒಂದು ಲಕ್ಷ ರೂ. ನಗದು ಕಳವಾಗಿರುವುದು ಗಮನಕ್ಕೆ ಬಂದಿದ್ದು, ಅಲ್ಲಿದ್ದ ನಾಲ್ಕು ಬಳೆಗಳ ಬಗ್ಗೆಯೂ ಸಂಶಯದಿಂದ ತಪಾಸಣೆ ನಡೆಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿತ್ತು. ಅಸಲಿ ಬಳೆಯನ್ನು ತೆಗೆದು, ಅದೇ ರೀತಿಯ ನಕಲಿ ಬಳೆಗಳನ್ನು ಕಪಾಟಿನಲ್ಲಿರಿಸಲಾಗಿತ್ತು. ಈ ಬಗ್ಗೆ ಅಶೋಕ್ ಕುಮಾರ್ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮನೆಕೆಲಸದಾಳುವಿನ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




