ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಚೆರ್ವತ್ತೂರಿನಲ್ಲಿ ನಾಲ್ಕು ಕಿಲೋ ನಕಲಿ ಚಿನ್ನ ವಶಪಡಿಸಿಕೊಮಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ರೈಲ್ವೆ ನಿಲ್ದಾಣ ಸನಿಹದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಶ್ರಿರಂಗಪಟ್ಟಣ ನಿವಾಸಿಗಳಾದ ಧರ್ಮ, ಶ್ಯಾಮಲಾಲ್ ಹಾಗೂ ಈತನ ಪತ್ನಿ ಬಂಧಿತರು. ಹೂವಿನ ವ್ಯಾಪಾರಿಗಳಾಗಿರುವ ಇವರು, ಭೂಮಿ ಅಗೆಯುವ ಸಂದರ್ಭ ಲಭಿಸಿದ ನಿಧಿಯಲ್ಲಿ ಈ ಚಿನ್ನ ಲಭಿಸಿರುವುದಾಗಿ ನಂಬಿಸಿ ಒಬ್ಬ ಸಿನಿಮಾ ಕಾರ್ಯಕರ್ತನಿಗೆ 15ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಧ್ಯೆ ಇವರನ್ನು ಸೆರೆಹಿಡಿಯಲಾಗಿದೆ.
ಚಿನ್ನ ಮಾರಾಟದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ನೇತೃತ್ವದ ವಿಶೇಷ ತಂಡದ ಸದಸ್ಯರೊಬ್ಬರಿಗೆ ಈ ಸಿನಿಮಾ ಕಾರ್ಯಕರ್ತ ಮಾಹಿತಿ ನೀಡಿದ್ದರು. ತಂಡ ವಾಸಿಸುತ್ತಿದ್ದ ಜಾಗಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯ ನೆಪದಲ್ಲಿ ತೆರಳಿದ ಪೊಲೀಸರ ತಂಡ ಪರಿಶೀಲನೆ ನಡೆಸಿ, ವಂಚಕರನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತಾಮ್ರದ ಸರಿಗೆಗೆ ಅತ್ಯಂತ ನಾಜೂಕಿನಿಂದ ಚಿನ್ನದ ಲೇಪನ ನೀಡಿ ಈ ಆಭರಣ ತಯಾರಿಸಲಾಗಿದೆ. ಕೃತ್ಯದ ಹಿಂದೆ ಬೇರೆಯವರ ಕೈವಾಡವಿರುವ ಹಾಗೂ ಬೇರೆ ಸ್ಥಳದಲ್ಲಿ ಇಂತಹ ವಂಚನೆ ನಡೆಸಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂದೇರ ಠಾಣೆ ಇನ್ಸ್‍ಪೆಕ್ಟರ್ ಪ್ರಶಾಂತ್, ಎಸ್.ಐ ಕೆ. ಸತೀಶ್, ವಿಶೇಷ ಸಕ್ವೇಡ್ ಸದಸ್ಯ ಪ್ರಮೋದ್ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




