ಕಾಸರಗೋಡು: ಜಿಲ್ಲಾ ಪಂಚಾಯಿತಿ ಕಚೇರಿ ವಠಾರದ ಬಹು ಅಂತಸ್ತಿನ ನೂತನ ಅನೆಕ್ಸ್ ಕಟ್ಟಡವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆ. 23ರಂದು ಬೆಳಗ್ಗೆ 11ಕ್ಕೆ ಉದ್ಘಾಟಿಸುವರು. ವಿಡಿಯೊ ಕಾನ್ಫರೆನ್ಸ್ ಹಾಲ್, ಮೀಟಿಂಗ್ ಹಾಲ್, ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಸದಸ್ಯರ ಕಚೇರಿ ಒಳಗೊಂಡ ಮೂರು ಅಂತಸ್ತಿನ ಈ ಕಟ್ಟಡವನ್ನು 5.3ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವುದಾಗಿ ಜಿಪಂ ಅದ್ಯಕ್ಷೆ ಬೇಬಿ ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಟ್ಟು 14,795 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪರಿಸರ ಸ್ನೇಹಿಯಾಗಿರುವ ಕಟ್ಟಡವನ್ನು ತಿರುವನಂತಪುರದ ಹ್ಯಾಬಿಟಾಟ್ ಗ್ರೂಪ್ ನಿರ್ಮಿಸಿದೆ. ಕಟ್ಟಡದ ಅಂಗಳದಲ್ಲಿ ಖ್ಯಾತ ಶಿಲ್ಪಿ ಕಾನಾಯಿ ಕುಞÂರಾಮನ್ ನಿರ್ಮಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರ ಸ್ಮಾರಕ ಪ್ರತಿಮೆ ಇದೆ. ಸಚಿವ ಕಡನ್ನಪಲ್ಲಿ ರಾಮಚಂದ್ರನ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಪದ್ಮಶ್ರೀ ಜಿ. ಶಂಕರ್ ಮತ್ತು ಶಿಲ್ಪಿ ಕಾನಾಯಿ ಕುಞÂರಾಮನ್ ಅವರನ್ನು ಮುಖ್ಯಮಂತ್ರಿ ಸನ್ಮಾನಿಸುವರು. ಸಂಸದರು, ಶಾಸಕರು ಹಾಗೂ ಸ್ಥಳೀಯಾಡಳಿತ ಪ್ರಧಾನ ಕಾರ್ಯದರ್ಶಿ ಸಾಂಬಶಿವರಾವ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಸ್ಥಾಯಿ ಸಮಿತಿ ಸದಸ್ಯರಾದ ಎಸ್.ಎನ್.ಸರಿತಾ, ಶಿನೋಜ್ ಚಾಕೋ, ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರೆಹಮಾನ್, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಶ್ಯಾಮಲಕ್ಷ್ಮಿ, ಹಣಕಾಸು ಅಧಿಕಾರಿ ಎಂ.ಎಸ್.ಶಬರೀಶ್ ಉಪಸ್ಥಿತರಿದ್ದರು.






