ಕಾಸರಗೋಡು: ಹೊಟ್ಟೆಯಲ್ಲಿನ ಗೆಡ್ಡೆ ತೆರವುಗೊಳಿಸುವ ಶಸ್ತ್ರ ಚಿಕಿತ್ಸೆ ಮಧ್ಯೆ ಅಂಡಾಶಯವನ್ನೇ ತೆಗೆದುಹಾಕಿರುವ ಬಗ್ಗೆ ಯುವತಿ ನೀಡಿರುವ ದೂರಿನ ಮೇರೆಗೆ ಕಾಞಂಗಾಡು ನಾರ್ತ್ ಕೋಟಚ್ಚೇರಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯೆ ಡಾ. ರೇಷ್ಮಾ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹೊಸದುರ್ಗ ಕೊಳವಯಲ್ ನಿವಾಸಿ ಯುವತಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿ ಕ್ಲಿನಿಕ್‍ಗೆ ತೆರಳಿದ್ದು, ವೈದ್ಯರ ತಪಾಸಣೆಯಿಂದ ಹೊಟ್ಟೆಯ ಬಲಭಾಗದ ಅಂಡಾಶಯದಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಇದನ್ನು ತೆರವುಗೊಳಿಸಲು ವೈದ್ಯರು ಶಿಫಾರಸುಮಾಡಿದ್ದರು. ಇದಕ್ಕಾಗಿ 2021 ಸೆ. 27ರಂದು ಯುವತಿ ಕ್ಲಿನಿಕ್‍ನಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದು, ತಿಂಗಳ ನಂತರ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಮತ್ತೆ ಅದೇ ವೈದ್ಯರನ್ನು ಸಂಪರ್ಕಿಸಿದಾಗ ಇದಕ್ಕೆ ಸಂಬಂಧಿಸಿದ ಔಷಧ ನೀಡಿದ್ದರೂ, ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳಲಾರಂಭಿಸಿತ್ತು. 2024 ಜನವರಿಯಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಬಲಭಾಗದ ಅಂಡಾಶಯ ಸಂಪೂರ್ಣ ತೆರವುಗೊಳಿಸಿರುವುದು ಪತ್ತೆಯಾಗಿತ್ತು. ನಂತರ ಈ ವೈದ್ಯೆಯನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಊರಲ್ಲಿ ಇಲ್ಲ ಎಂಬ ಉತ್ತರ ಲಭಿಸಿತ್ತು. ಈ ಬಗ್ಗೆ ಮುಖ್ಯಮಂತ್ರಿ, ಆರೋಗ್ಯ ಸಚಿವೆಗೆ ದೂರು ನೀಡಿದ್ದು, ಆರೋಗ್ಯ ಸಚಿವಾಲಯದಿಂದ ಲಭಿಸಿದ ನಿರ್ದೇಶದನ್ವಯ ಯುವತಿ ಹೊಸದುರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

