ನವದೆಹಲಿ: ತಮಿಳುನಾಡಿನ ವಿಧಾನಸಭೆಯ ಅಂಗೀಕಾರ ಪಡೆದಿರುವ ಮಸೂದೆಗಳಿಗೆ ಅಂಕಿತ ಹಾಕದೆ ಇರುವ ರಾಜ್ಯಪಾಲ ಆರ್.ಎನ್. ರವಿ ಅವರ ನಡೆಯನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಅವರು 'ತಮ್ಮದೇ ಆದ ಪ್ರಕ್ರಿಯೆಗಳನ್ನು ಅಳವಡಿಸಿಕೊಂಡಿರುವಂತೆ ಕಾಣುತ್ತಿದೆ' ಎಂದು ಹೇಳಿದೆ.
ಹೀಗೆ ಮಾಡುವ ಮೂಲಕ ರವಿ ಅವರು ಸಂವಿಧಾನದ 200ನೆಯ ವಿಧಿಯ ಆಶಯಕ್ಕೆ ಸೋಲಾಗುವಂತೆ ಮಾಡುತ್ತಿರುವಂತಿದೆ ಎಂದೂ ಹೇಳಿದೆ. ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು, ಮಸೂದೆಗಳಿಗೆ ರಾಜ್ಯಪಾಲರು ಎಷ್ಟು ಕಾಲ ಅಂಕಿತ ಹಾಕದೆ ಇರಬಹುದು ಎಂದು ಪ್ರಶ್ನಿಸಿದೆ.
ರಾಜ್ಯಪಾಲರು ಮಸೂದೆಗೆ ಸಹಿ ಹಾಕುತ್ತಿಲ್ಲ, ಮಸೂದೆಗಳನ್ನು ಮರುಪರಿಶೀಲಿಸುವಂತೆ ವಿಧಾನಸಭೆಯನ್ನು ಕೋರುತ್ತಲೂ ಇಲ್ಲ. ಹೀಗೆ ಮಾಡುವುದರಿಂದ ಏನೂ ಸ್ಪಷ್ಟವಾಗುವುದಿಲ್ಲ ಎಂದು ಪೀಠ ಹೇಳಿದೆ.
ವಿಧಾನಸಭೆ ಅಂಗೀಕಾರ ನೀಡಿದ ಮಸೂದೆಗಳಿಗೆ ಅಂಕಿತ ಹಾಕುವ ಅಥವಾ ಆ ಮಸೂದೆಗಳನ್ನು ತಡೆಹಿಡಿಯುವ ಅಧಿಕಾರವನ್ನು 200ನೆಯ ವಿಧಿಯು ರಾಜ್ಯಪಾಲರಿಗೆ ನೀಡುತ್ತದೆ. ರಾಜ್ಯಪಾಲರು ಮಸೂದೆಯನ್ನು ವಿಧಾನಸಭೆಗೆ ಮರುಪರಿಶೀಲನೆಗೆ ಕಳುಹಿಸುವ ಅಧಿಕಾರವನ್ನೂ ಹೊಂದಿದ್ದಾರೆ.
ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ರಾಕೇಶ್ ದ್ವಿವೇದಿ, ಎ.ಎಂ. ಸಿಂಘ್ವಿ, ಮುಕುಲ್ ರೋಹಟಗಿ ಮತ್ತು ಪಿ. ವಿಲ್ಸನ್ ಅವರು ಮಂಡಿಸಿದ ವಾದಗಳನ್ನು ಆಲಿಸಿದ ಪೀಠವು ತಾನು ಪರಿಗಣಿಸಬೇಕಿರುವ ವಿಷಯಗಳು ಯಾವುವು ಎಂಬುದನ್ನು ಅಂತಿಮಗೊಳಿಸಿತು.
ರಾಜ್ಯಪಾಲರ ಪರವಾಗಿ ವಾದಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, ರಾಜ್ಯಪಾಲರ ಹುದ್ದೆ ಬಹಳ ಸಣ್ಣದು ಎಂದು ಬಿಂಬಿಸಲು ಸರ್ಕಾರ ಯತ್ನಿಸಿದೆ ಎಂದರು. ಆದರೆ ಪೀಠವು, 'ರಾಜ್ಯಪಾಲರ ಅಧಿಕಾರದ ಮಹತ್ವವನ್ನು ತಗ್ಗಿಸಲು ನಾವು ಬಯಸುವುದಿಲ್ಲ. ಅವರ ಕಾರ್ಯಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ಹೇಳಿತು.
ಪೀಠವು ಪರಿಶೀಲಿಸಲಿರುವ ಅಂಶಗಳು
ವಿಧಾನಸಭೆಯು ಮಸೂದೆಗೆ ಅಂಗೀಕಾರ ನೀಡಿ ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸುತ್ತದೆ. ರಾಜ್ಯಪಾಲರು ಸಹಿ ಹಾಕುವುದಿಲ್ಲ. ಆದರೆ ಮಸೂದೆಗೆ ಮತ್ತೆ ಅಂಗೀಕಾರ ನೀಡುವ ವಿಧಾನಸಭೆಯು ಅದನ್ನು ಅಂಕಿತಕ್ಕೆ ಮತ್ತೆ ರಾಜ್ಯಪಾಲರಿಗೆ ಕಳುಹಿಸುತ್ತದೆ. ಆಗಲೂ ಅದನ್ನು ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ?
ರಾಜ್ಯಪಾಲರಿಗೆ ಮಸೂದೆಗಳಿಗೆ ಸಹಿ ಹಾಕುವ ಹಾಕದೆ ಇರುವ ವಿಚಾರದಲ್ಲಿ ಇರುವ ಪರಮಾಧಿಕಾರ ಏನು ಅಂತಹ ಅಧಿಕಾರಕ್ಕೆ ಸಂವಿಧಾನದ ಚೌಕಟ್ಟಿನಲ್ಲಿ ಸ್ಥಾನವಿದೆಯೇ?
ಮಸೂದೆಗಳನ್ನು ರಾಷ್ಟ್ರಪತಿಯವರ ಗಮನಕ್ಕೆ ತರುವ ರಾಜ್ಯಪಾಲರ ಅಧಿಕಾರವು ಕೆಲವು ನಿರ್ದಿಷ್ಟ ವಿಷಯಗಳಿಗೆ ಸೀಮಿತವೇ ಅಥವಾ ಅದರ ಆಚೆಗೂ ಆ ಅಧಿಕಾರ ಇದೆಯೇ?
ರಾಷ್ಟ್ರಪತಿಯವರಿಗೆ ಮಸೂದೆಯನ್ನು ರವಾನಿಸುವಾಗ ರಾಜ್ಯಪಾಲರು ಪರಿಗಣಿಸುವ ಅಂಶಗಳು ಯಾವುವು ಸಂವಿಧಾನದ 200ನೆಯ ವಿಧಿಯನ್ನು ಹೇಗೆ ವ್ಯಾಖ್ಯಾನಿಸಬೇಕು?

