ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯೋಧರೊಬ್ಬರು ಆರು ಮಂದಿಗೆ ಜೀವದಾನ ಮಾಡಿ, ಇಹಲೋಕ ತ್ಯಜಿಸಿದ್ದಾರೆ. ಪೆರುಂಬಳ ತೆಕ್ಕೇವಳಪ್ಪು ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆ. ನಿದೀಶ್(34)ಆರು ಮಂದಿಗೆ ಜೀವದಾನ ಮಾಡಿ ಮೃತಪಟ್ಟ ಯೋಧ.
ನಿಧೀಶ್ ಚಲಾಯಿಸುತ್ತಿದ್ದ ಸ್ಕೂಟರ್ ಶನಿವಾರ ರಾತ್ರಿ ಚಟ್ಟಂಚಾಲ್ ಅಂಡರ್‍ಪಾಸ್ ಬಳಿ ರಸ್ತೆ ಹಂಪ್‍ಗೆ ಬಡಿದು ಮಗುಚಿಬಿದ್ದು, ಗಂಭೀರ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ಏರ್‍ಫೋರ್ಸ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದುಕಿ ಉಳಿಯುವ ಸಾಧ್ಯತೆ ಸಂಪೂರ್ಣ ಕೈಬಿಟ್ಟ ವೈದ್ಯರು ಸೈನಿಕ ಅಧಿಕಾರಿಗಳು, ಹೆತ್ತವರು, ಪೊಲೀಸರ ಜತೆ ಚರ್ಚೆ ನಡೆಸಿ ಯೋಧನ ಕಣ್ಣು, ಹೃದಯ, ಶ್ವಾಸಕೋಶ, ಕರುಳು, ಕಿಡ್ನಿ ಮುಂತಾದ ಭಾಗಗಳನ್ನು ಏರ್‍ಲಿಫ್ಟ್ ಮೂಲಕ ದೇಶದ ವಿವಿಧೆಡೆ ತುರ್ತು ಚಿಕಿತ್ಸೆಯಲ್ಲಿರುವವರಿಗಾಗಿ ಕಳುಹಿಸಿಕೊಡಲಾಗಿದೆ.
2014ರಲ್ಲಿ ಸೈನ್ಯಕ್ಕೆ ಪ್ರವೇಶಿಸಿದ್ದ ಇವರು, ಹರ್ಯಾಣ, ಅಂಬಾಲಾದಲ್ಲಿ ಸಿಗ್ನಲ್‍ಮ್ಯಾಣ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ದಿ. ಎಂ.ಪಿ ರಾಜನ್.ಕೆ. ಪಾರ್ವತೀ ದಂಪತಿ ಪುತ್ರ.




