ಪೆರ್ಲ: ಪೆರ್ಲ ಸ್ವರ್ಗ ಪಾಣಾಜೆ ಅಂತಾರಾಜ್ಯ ಸಂಪರ್ಕ ರಸ್ತೆಯ ಸ್ವರ್ಗ ಜಂಕ್ಷನ್ ನಿಂದ ವಾಣೀನಗರ ಕಿನ್ನಿಂಗಾರು ರಸ್ತೆಯಲ್ಲಿ 100 ಮೀ.ಮುಂದುವರಿದು ಎಡಕ್ಕೆ ತಿರುಗಿ ಕರ್ನಾಟಕ ರಾಜ್ಯ ಸಂಪರ್ಕಿಸುವ ಸ್ವರ್ಗ-ತೂಂಬಡ್ಕ- ಆರ್ಲಪದವು ರಸ್ತೆಯ ಕೇರಳದ 1.3 ಕಿ.ಮೀ. ರಸ್ತೆ ಭಾಗ ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಚಾರ ದುರವಸ್ಥೆ ಎದುರಿಸುತ್ತಿದೆ.
ತೂಂಬಡ್ಕ ಬಯಲಿನ ನಾಲ್ಕೈದು ಕೆಂಪು ಕಲ್ಲು ಕೋರೆಗಳಿಂದ ಈ ಹಿಂದೆ ಪ್ರತಿ ದಿನ ಹತ್ತಕ್ಕೂ ಹೆಚ್ಚು ಲಾರಿಗಳಲ್ಲಿ ತೂಂಬಡ್ಕ-ಸ್ವರ್ಗ-ಪಾಣಾಜೆ ಮೂಲಕ ಹಾಸನ, ಕೊಡಗು ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕೆಂಪು ಕಲ್ಲು ಸಾಗಿಸಲಾಗುತ್ತಿತ್ತು. ಪ್ರಸ್ತುತ ಕೋರೆ ಹೊಂಡ ಭೂಗರ್ಭ ತಲುಪಿದ್ದು ಕಲ್ಲು ಖಾಲಿಯಾಗಿದೆ. ಕೋರೆ ಸಂಖ್ಯೆ ಒಂದಕ್ಕಿಳಿದಿದೆ. ಕಲ್ಲು ಸಾಗಾಟದ ಲಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ.
ಕಲ್ಲು ಸಾಗಾಟದ ದೊಡ್ಡ ಲಾರಿ, ಟಿಪ್ಪರ್ ಭಾರಕ್ಕೆ ವಾಹನದ ಟಯರ್ ಹೋಗುವ ಎರಡೂ ಬದಿ ಸವೆದು ಒಂದಡಿ ತಗ್ಗಿದೆ. ನಡು ಭಾಗ ಎತ್ತರಿಸಿದ ರಸ್ತೆಯಲ್ಲಿ ಕಾರುಗಳ ಅಡಿ ಭಾಗ ನೆಲಕ್ಕೆ ತಾಗುತ್ತಿದೆ. ತ್ರಿಚಕ್ರ ವಾಹನಗಳ ಮುಂದಿನ ಚಕ್ರವನ್ನು ರಸ್ತೆಯ ನಡು ಭಾಗದಿಂದ ಕೆಳಗಿಳಿಸಲೂ ಸಾಧ್ಯವಿಲ್ಲ. ವಾಹನಗಳು ಎದುರು ಬದುರಾದರೆ 100 ಮೀ ಗೂ ಹೆಚ್ಚು ರಿವರ್ಸ್ ಗಿಯರೇ ಗತಿ.
ರಸ್ತೆಯ ಶೋಚನೀಯ ಸ್ಥಿತಿಯಿಂದ ಅಟೋ ರಿಕ್ಷಾ, ಟ್ಯಾಕ್ಸಿ ವಾಹನ ಚಾಲಕರು ಬಾಡಿಗೆ ನಿರಾಕರಿಸುತ್ತಿದ್ದಾರೆ. ಇದರಿಂದ ತೂಂಬಡ್ಕ ಗುಡ್ಡೆ ಮೇಲಿನ ಮೂರು ಎಸ್ ಸಿ ಕುಟುಂಬಗಳು, ಕರ್ನಾಟಕ ಪಾಲ್ತಮೂಲೆ ಹಾಗೂ ತೂಂಬಡ್ಕದ 15ಕ್ಕೂ ಹೆಚ್ಚು ಎಸ್ ಟಿ ಸಹಿತ ಈ ರಸ್ತೆಯನ್ನು ದೈನಂದಿನ ಹಾಗೂ ತುರ್ತು ಸನ್ನಿವೇಶದಲ್ಲಿ ಅವಲಂಬಿಸಿರುವ ಸುಮಾರು 50 ಕುಟುಂಬಗಳು ತೊಂದರೆಗೊಳಗಾಗಿದೆ.
ಈ ಅಂತಾರಾಜ್ಯ ಸಂಪರ್ಕ ರಸ್ತೆಗೆ ತ್ರಿಸ್ತರ ಪಂಚಾಯಿತಿ ಅನುದಾನಗಳು ಅಪರ್ಯಾಪ್ತವಾಗಿದ್ದು, ಪಿಎಂಜಿ ಎಸ್ ವೈ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಅಧಿಕೃತರು ತಯಾರಾಗಬೇಕು.
ತೂಂಬಡ್ಕ ರಸ್ತೆಯ ಚರಿತ್ರೆ:
ಎಣ್ಮಕಜೆ ಪಂಚಾಯಿತಿ 6ನೇ ವಾರ್ಡ್ ವ್ಯಾಪ್ತಿಯ ಸ್ವರ್ಗ-ತೂಂಬಡ್ಕ ರಸ್ತೆಯನ್ನು ಸುಮಾರು 40 ವರ್ಷ ಹಿಂದೆ ಸ್ಥಳೀಯರು ನಿರ್ಮಿಸಿದ್ದರು. 30 ವರ್ಷ ಹಿಂದೆ ಕರ್ನಾಟಕ ಗಡಿ ತನಕ ತಲುಪಿಸಲಾಗಿದೆ. ಕೇರಳ ಮತ್ತು ಕರ್ನಾಟಕ ವ್ಯಾಪ್ತಿಯ ಬಂಟಾಜೆ ರಕ್ಷಿತಾರಣ್ಯದ ಮೂಲಕ ಹಾದು ಹೋಗುವ ಈ ರಸ್ತೆಯನ್ನು ಹಲವು ರೀತಿಯ ಅಡಚಣೆ ಬಳಿಕ 20 ವರ್ಷ ಹಿಂದೆ ತೂಂಬಡ್ಕ ಗಡಿಯಿಂದ ಕರ್ನಾಟಕ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪ್ರಸ್ತುತ ಈ ರಸ್ತೆ ತೂಂಬಡ್ಕದಿಂದ ಮುಂದುವರಿದು ಸೂರಂಬೈಲು ಭರಣ್ಯ ಮೂಲಕ ಮತ್ತೆ ಪೆರ್ಲ-ಸ್ವರ್ಗ-ಪುತ್ತೂರು ರಸ್ತೆ ಸೇರುತ್ತಿದೆ.
ಒಂದೇ ವರ್ಷದಲ್ಲಿ ಡಾಂಬರ್ ಡಮಾರ್!:
ಸ್ವರ್ಗ ತೂಂಬಡ್ಕ ರಸ್ತೆ ಅಭಿವೃದ್ಧಿಯ ನಿರಂತರ ಬೇಡಿಕೆ, ಮನವಿ ಪರಿಗಣಿಸಿ ಮಂಜೇಶ್ವರ ಶಾಸಕರ 2016-17 ವರ್ಷದ ವಿಶೇಷ ಅಭಿವೃದ್ಧಿ ನಿಧಿ (ಎಸ್.ಡಿ.ಎಫ್.) 4.75 ಲಕ್ಷ ಅನುದಾನದಲ್ಲಿ ರಸ್ತೆ ಆರಂಭದ 173 ಮೀ.ಭಾಗ ಎಣ್ಮಕಜೆ ಪಂಚಾಯಿತಿ ಮಿನಿ ಸ್ಟೇಡಿಯಂ ತಿರುವಿನವರೆಗೆ 2017ರಲ್ಲಿ ಡಾಮರೀಕರಣಗೊಂಡಿತ್ತು. ಆದರೆ ಒಂದೇ ವರ್ಷದಲ್ಲಿ ಡಾಂಬರ್ ಸಂಪೂರ್ಣ ಕಿತ್ತು ಹೋಗಿ ರಸ್ತೆ ಪೂರ್ವಸ್ಥಿತಿಗಿಂತ ಶೋಚನೀಯವಾಗಿದೆ. ರಸ್ತೆ ಜರ್ಜರಿತವಾಗಿ ಆರು ವರ್ಷ ಕಳೆದರೂ ದುರಸ್ತಿ ನಡೆದಿಲ್ಲ.
ಕರ್ನಾಟಕ ರಸ್ತೆ ಬಲು ಸುಂದರ:
ಪಾಣಾಜೆ ಗ್ರಾಪಂ ವ್ಯಾಪ್ತಿಯ ಸೂರಂಬೈಲು ಸರ್ಕಾರಿ ಶಾಲೆ ವರೆಗೆ ಕಾಂಕ್ರೀಟ್, ಮುಂದುವರಿದು ಇಂಟರ್ ಲಾಕ್, ಭರಣ್ಯ ಕೂಡು ರಸ್ತೆ ತನಕ ಮತ್ತೆ ಕಾಂಕ್ರೀಟ್, ಭರಣ್ಯದಿಂದ ಸ್ವರ್ಗ-ಪುತ್ತೂರು ರಸ್ತೆ ತನಕ ಡಾಂಬರ್ ರಸ್ತೆಯಾಗಿದೆ. ಕರ್ನಾಟಕ ಆರಂಭದ ಸ್ವಲ್ಪ ಭಾಗ ಹೊರತು ಪಡಿಸಿ ಸುಮಾರು 3 ಕಿ.ಮೀ.ಸಂಪೂರ್ಣ ಸುಸ್ಥಿತಿಯಲ್ಲಿದೆ.
ಕೇರಳದಲ್ಲಿ ಕಲ್ಲು ಮಣ್ಣು !:
ಕೇರಳ ಭಾಗದ 1.3 ಕಿ.ಮೀ.ಕಚ್ಚಾ ರಸ್ತೆ ಸಂಪೂರ್ಣ ಸವೆದು ಹೊಂಡ-ಗುಂಡಿ, ಧೂಳಿನಿಂದ ಕೂಡಿದೆ. ತೂಂಬಡ್ಕ ಪಾರೆ ಪ್ರದೇಶದ ರಸ್ತೆ ಸವೆದಿದೆ. ಕರ್ನಾಟಕ ಗಡಿಯಲ್ಲಿ ಹೊಸ ಬಿಎಸ್ ಎನ್ ಎಲ್ ಟವರ್ ಸ್ಥಾಪಿಸಲಾದ ರಸ್ತೆ ಭಾಗದಲ್ಲಿ ರಸ್ತೆ ಮಧ್ಯೆ ಹೊಂಡ ಸೃಷ್ಟಿಯಾಗಿದೆ. ಪ್ರತಿ ಮಳೆಗಾಲದ ಬಳಿಕ ಸ್ಥಳೀಯರು, ಕ್ವಾರೆ ಕಾರ್ಮಿಕರು ಕಲ್ಲು ಮಣ್ಣು ಹಾಕಿ ದುರಸ್ತಿ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ವಾಹನಗಳು ಜಾರುವುದು, ಹೂತು ಹೋಗುವುದು ಮಾಮೂಲಾಗಿದೆ. ಬೈಕ್ ಸವಾರರು ಬ್ಯಾಲೆನ್ಸ್ ತಪ್ಪದಂತೆ ಎರಡೂ ಕಾಲನ್ನು ಅತ್ತಿತ್ತ ಚಾಚಿ ಸರ್ಕಸ್ ಮಾಡಬೇಕಾಗುತ್ತಿದೆ. ಚರಳು ರಸ್ತೆಯ ಇಳಿಜಾರಿನಲ್ಲಿ ಅಪ್ಪಿ ತಪ್ಪಿ ಮುಂದಿನ ಬ್ರೇಕ್ ಹಿಡಿದರೆ ಬೈಕ್ ಪಲ್ಟಿಯಾಗುವ, ತುಂಬ ದೂರ ಎಳೆದೊಯ್ಯುವ ಅಪಾಯವಿದೆ.
ಐತಿಹಾಸಿಕ ಜಂಬ್ರಿ ಗುಹೆ ರಸ್ತೆ:
12 ವರ್ಷಗಳಿಗೊಮ್ಮೆ ಗುಹಾಯಾತ್ರೆ ಕೈಗೊಳ್ಳಲಾಗುವ ಐತಿಹಾಸಿಕ ಜಂಬ್ರಿ ಗುಹೆ, ಚೆಂಡೆತ್ತಡ್ಕ ಬಯಲು, ಜಾಂಬ್ರಿ ಫಾಲ್ಸ್, ಕಿನ್ನಿಂಗಾರು-ಆರ್ಲಪದವು ರಸ್ತೆ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲ, ಭರಣ್ಯ ವೆಂಕಟ್ರಮಣ ಶ್ರೀದುರ್ಗಾ ಪರಮೇಶ್ವರಿ ದೇಗುಲ, ಗಿಳಿಯಾಲು, ಮಣ್ಣಂಗಳ, ದೇವಸ್ಯ, ಸೂರಂಬೈಲು ಸರ್ಕಾರಿ ಶಾಲೆ, ತೂಂಬಡ್ಕ ಬಯಲು, ಬಿ.ಎಎಸ್.ಎನ್.ಎಲ್ ಟವರ್, ಪಾಲ್ತಮೂಲೆ ಮತ್ತಿತರ ಪ್ರದೇಶಗಳಿಗೆ ಸ್ವರ್ಗದಿಂದ ತೆರಳಲು ಹತ್ತಿರ ದಾರಿಯಾಗಿದೆ.
"ತುರ್ತು ಪರಿಸ್ಥಿತಿ"ಯ ಕಳ್ಳ ದಾರಿ; ಕರೋನಾ ಕಾಲದ ರಾಜ ಬೀದಿ:
ಇಂದಿರಾಗಾಂಧಿ ಪ್ರದಾನಮಂತ್ರಿಯಾಗಿದ್ದಾಗ 1975 ಜೂನ್ 25ರಿಂದ 1977ರ ಮಾರ್ಚ್ 21ವರೆಗೆ ಭಾರತದಲ್ಲಿ ಜಾರಿಯಲ್ಲಿದ್ದ 21 ತಿಂಗಳುಗಳ "ತುರ್ತು ಪರಿಸ್ಥಿತಿ" ಯ ಸಂದರ್ಭದಲ್ಲಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಅಕ್ಕಿ ಹೊತ್ತು ಸಾಗಿಸಲು ಈ ದಾರಿಯನ್ನು ಬಳಸಲಾಗಿತ್ತು. ಕರ್ನಾಟಕದಲ್ಲಿ ಗೋಡಂಬಿ ಬೆಲೆ ಕೇರಳಕ್ಕಿಂತ ಹೆಚ್ಚಿದ್ದಾಗ ಅಕ್ರಮ ಸಾಗಾಟ ತಡೆಯಲು ಸ್ವರ್ಗದಲ್ಲಿ 20 ವರ್ಷ ಹಿಂದಿನ ತನಕ ವರ್ಷದ ಎರಡು ತಿಂಗಳ ಅವಧಿಯ ತಾತ್ಕಾಲಿಕ ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೇರಳದ ವಿವಿಧ ಭಾಗಗಳಿಂದ ವಾಹನಗಳಲ್ಲಿ ತರುವ ಗೇರು ಬೀಜದ ಗೋಣಿ ಚೀಲಗಳನ್ನು ತೂಂಬಡ್ಕ ದಾರಿ ಮೂಲಕ ಹೊತ್ತು ಸಾಗಿಸಿ ಕರ್ನಾಟಕ ಭಾಗ ತಲುಪಿಸಿ ಮತ್ತೆ ವಾಹನಗಳಿಗೆ ತುಂಬಲಾಗುತ್ತಿತ್ತು. 2019-20ರ ಕರೋನಾ ಲಾಕ್ ಡೌನ್ ಅವಧಿಯಲ್ಲಿ ರಾಜ್ಯದ ಎಲ್ಲಾ ಗಡಿಗಳನ್ನು ಮುಚ್ಚಿದ್ದಾಗ ಜನರು ಕೇರಳ-ಕರ್ನಾಟಕ ಪ್ರವೇಶಿಸಲು ಈ ಮಾರ್ಗವನ್ನು ಬಳಸಿದ್ದರು. ಅಕ್ರಮ ಮದ್ಯ, ಮರಳು, ದನ ಸಾಗಾಟಕ್ಕೆ ಈ ರಸ್ತೆಯನ್ನು ಬಳಸಲಾಗುತ್ತಿದೆ.
ಅಭಿಮತ: :
" ಪಿಎಂಜಿಎಸ್ ವೈ 4ನೇ ಹಂತದ ಯೋಜನೆಯಡಿ ಗ್ರಾಮ ಸಡಕ್ ಆಪ್ ನಲ್ಲಿ ರಸ್ತೆಯ ಚಿತ್ರಗಳು ಅಪ್ ಲೋಡ್ ಆಗಿದೆ. ರಾಜ್ಯ ಸರ್ಕಾರದ ಅಂಗೀಕಾರ ಲಭಿಸಿದ್ದು ಕೇಂದ್ರ ಸರಕಾರದ ಪರಿಗಣನೆಯಲ್ಲಿದೆ. ರಸ್ತೆಗೆ ಲಭಿಸುವ ರ್ಯಾಂಕ್ ಅಭಿವೃದ್ಧಿಗೆ ನಿರ್ಣಯಕವಾಗಿದೆ"
-ಸುನಿಲ್ ಕುಮಾರ್ ರೈ ಸಿ.
ಪಿಎಂಜಿಎಸ್ ವೈ ಮೇಲ್ವಿಚಾರಕರು
ಮಂಜೇಶ್ವರ ವಿಭಾಗ, ಕಾಸರಗೋಡು





.jpg)
.jpg)
.jpg)
.jpg)
