ಬದಿಯಡ್ಕ: ಫೆಬ್ರವರಿ 11 ರಿಂದ 16 ರ ತನಕ ಏತಡ್ಕ ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭಕ್ಕಾಗಿ ಅಳವಡಿಸಿದ ಶಿವಾರ್ಪಣಂ ಯೋಜನೆಯಂತೆ ದೇಸೀ ಗೋವಿನ ಗೋಮಯದಿಂದ ಬೆರಣಿ ತಟ್ಟಿಕೊಡಲು ನಿರ್ದೇಶಿಸಲಾಗಿತ್ತು. ಆ ಪ್ರಕಾರ ನಾಡಿನಾದ್ಯಂತ ಅನೇಕ ಮಂದಿ ಬೆರಣಿಯನ್ನು ಸಿದ್ಧಗೊಳಿಸಿದ್ದರು. ಅವುಗಳನ್ನೆಲ್ಲ ಜ.27 ಸೋಮವಾರ ಸೋಮ ಪ್ರದೋಷದ ಶುಭ ದಿನದಂದು ಶ್ರೀ ಕ್ಷೇತ್ರದ ಪರಿಸರದಲ್ಲಿ ಸಂಗ್ರಹಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಊರ ಹಿರಿಯ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಗಣಪತಿ ಭಟ್ ಪತ್ತಡ್ಕ ಅಗ್ನಿಸ್ಪರ್ಶ ಗೈದು ಚಾಲನೆ ನೀಡಿದರು.
ಶುದ್ಧ ಭಸ್ಮ ಧಾರಣೆಗೆ ಬೇಕಾದ ಭಸ್ಮ ಹಿಂದೆ ಪ್ರತಿ ಮನೆಯಲ್ಲೂ ತಯಾರಾಗುತ್ತಿತ್ತು. ಈಗ ಮತ್ತೆ ಇದರ ತಯಾರಿಯ ಕೌಶಲ್ಯವನ್ನು ನಾಡಿಗೆ ಪರಿಚಯಸಬೇಕಾಗಿದೆ. ಈ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶಿವಾರ್ಪಣಂ ಯೋಜನೆ ಮೂಲಕ ನಡೆಸಿದ ಈ ಯತ್ನ ಸಾರ್ಥಕ ಎಂದು ಅವರು ಅಭಿಪ್ರಾಯಪಟ್ಟರು.
ಬ್ರಹ್ಮಕಲಶೋತ್ಸವ ಸಮಿತಿ ಸಂಯೋಜಕ ಡಾ ವೈ ವಿ ಕೃಷ್ಣಮೂರ್ತಿ ನೇತೃತ್ವವಹಿಸಿದ್ದರು. ಕಿರಣಾ ಕೃಷ್ಣಮೂರ್ತಿ, ಡಾ ಅನ್ನಪೂರ್ಣೇಶ್ವರಿ ಏತಡ್ಕ, ರಾಜಗೋಪಾಲ ಬೆಳೇರಿ, ಶಂಕರ ರೈ ಕುಂಬತೊಟ್ಟಿ, ವಿಶ್ವನಾಥ ರೈ, ಕೃಷ್ಣ ರೈ. ಕೆದಂಬಾಯಿಮೂಲೆ, ಶ್ರೀಧರ ಭಟ್, ವಿಷ್ಣು ಭಟ್ ಸಾಲೆತ್ತಡ್ಕ, ಶಾಂತಾ ಈಂದುಗುಳಿ, ಅಜಕ್ಕಳಮೂಲೆ ಶ್ರೀನಿವಾಸ ಭಟ್, ಕೋಟೆ ವಿಶ್ವೇಶ್ವರ ಭಟ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಜಕ್ಕಳಮೂಲೆ ನಾರಾಯಣ ಭಟ್ 10 ತೆಂಗಿನ ಗರಿ(ಮಡಲು) ಹೆಣೆದು ಶ್ರೀ ಕ್ಷೇತ್ರಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಪಳ್ಳತ್ತಡ್ಕ ವಲಯದ 263ನೇ ಪ್ರತಿರುದ್ರ ಪಾರಾಯಣವು 21 ಜನ ರುದ್ರ ಪಾಠಕರಿಂದ ನಡೆಯಿತು.
ಬ್ರಹ್ಮ ಕಲಶೋತ್ಸವ ಸಮಿತಿಯ ಧಾರ್ಮಿಕ ವಿಭಾಗದ ಸಂಚಾಲಕ ಚಂದ್ರಶೇಖರ ರಾವ್ ಕಡೇಕಲ್ಲು ಹಾಗೂ ಗಣರಾಜ ಕಡೇಕಲ್ಲು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.ಸಮಿತಿಯ ಸಂಯೋಜಕÀ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





