ಕಾಸರಗೋಡು: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಹಾಗೂ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ರಾಜ್ಯಮಟ್ಟದ ಚುಟುಕು ಕೃತಿಗಳ ಸ್ಪರ್ಧೆಯಲ್ಲಿ ಕಾಸರಗೋಡಿನ ಶ್ರೀಕೃಷ್ಣಯ್ಯ ಅನಂತಪುರ ಅವರ " ಎದೆ ಬಿಗಿದ ಕ್ಷಣಗಳು" ಕೃತಿ ಪ್ರಥಮ ಸ್ಥಾನ ಗಳಿಸಿದೆ.
ಎರಡನೆಯ ಬಹುಮಾನ ವಿಠ್ಠಲ ಗಾಂವಕರ ಶೆಟಗೇರಿ ಅವರ "ಅವ್ವ ನುಡಿದಂಡೆ", ಮೂರನೆಯ ಬಹುಮಾನ ಡಾ. ಪ್ರಭಾಕರ ನಾಯಕ ಅಂಕೋಲಾ ಅವರ "ಮಂಗಳಾರತಿ" ಕೃತಿಗಳಿಗೆ ದೊರಕಿದ್ದು, ಬೈಲಹೊಂಗಲ ತಾಲೂಕಿನ ಡಾ. ಮಲ್ಲಿಕಾರ್ಜುನ ಛಬ್ಬಿ ಅರವಳ್ಳಿ ಅವರ " ಹನಿ ಹಣತೆ" ಮೆಚ್ಚುಗೆ ಪಡೆದ ಕೃತಿಯಾಗಿ ಆಯ್ಕೆಯಾಗಿದೆ.
ಹಿರಿಯ ಸಾಹಿತಿ, ವಿಮರ್ಶಕ, ವಿಶ್ರಾಂತ ಪ್ರಾಧ್ಯಾಪಕ, ಡಾ. ಪಿ. ಜಿ. ಕೆಂಪಣ್ಣವರ ಅವರು ಕೃತಿಗಳ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸಿದ್ದು ಮಾ. 2ರಂದು ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗುವ 4 ನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು.
ಸ್ಪರ್ಧೆಗಾಗಿ ಒಟ್ಟು 45 ಕೃತಿಗಳು ಬಂದಿದ್ದು, ಅಂತಿಮ ಹಂತದಲ್ಲಿ ಹದಿನಾರು ಕೃತಿಗಳಲ್ಲಿ " ಎದೆ ಬಿಗಿದ ಕ್ಷಣಗಳು"ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.



