ನವದೆಹಲಿ: ನೌಕಾಪಡೆಗಾಗಿ ಅಭಿವೃದ್ದಿಪಡಿಸಲಾಗಿರುವ ಹಡಗು ನಿರೋಧಕ ಕ್ಷಿಪಣಿಯ (ಎನ್‌ಎಎಸ್‌ಎಂ-ಎಸ್‌ಆರ್) ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಚಾಂದಿಪುರದ ಕರಾವಳಿಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
'ನೌಕಾಪಡೆಯ ಹೆಲಿಕಾಪ್ಟರ್‌ನಿಂದ ಈ ಕ್ಷಿಪಣಿಯ (ಎನ್‌ಎಎಸ್‌ಎಂ-ಎಸ್‌ಆರ್) ಉಡ್ಡಯನ ಪರೀಕ್ಷೆಯನ್ನು ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ(ಐಟಿಆರ್) ಮಂಗಳವಾರ ನಡೆಸಲಾಯಿತು.
ನಿರ್ದೇಶಿತ ಹಡಗನ್ನು ಕ್ಷಿಪಣಿ ಕರಾರುವಾಕ್ಕಾಗಿ ಧ್ವಂಸಗೊಳಿಸಿತು' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ, ಈ ವರ್ಗದ ಮೊದಲ ಕ್ಷಿಪಣಿಯಾಗಿರುವ ಇದು ಹಲವು ಅತ್ಯಾಧುನಿಕ ಸಾಧನಗಳನ್ನು ಒಳಗೊಂಡಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಹಾಗೂ ಇದರ ಅಂಗಸಂಸ್ಥೆಗಳಾದ ರಿಸರ್ಚ್ ಸೆಂಟರ್ ಇಮಾರತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಹೈ ಎನರ್ಜಿ ಮಟಿರಿಯಲ್ಸ್ ಸಂಶೋಧನಾ ಪ್ರಯೋಗಾಲಯ ಹಾಗೂ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯಗಳು ಈ ಕ್ಷಿಪಣಿ ಅಭಿವೃದ್ಧಿಪಡಿಸಿವೆ.






