ನವದೆಹಲಿ: ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಎಸಗಿದ ಕೃತ್ಯಗಳ ವಿಚಾರವಾಗಿ ಕಾನೂನಿನ ಅಡಿ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿದ್ದರೆ ಮಾತ್ರ ಅಂತಹ ಪ್ರಕರಣಗಳನ್ನು ನ್ಯಾಯಾಲಯಗಳು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಪರಿಭಾವಿತ ಅನುಮತಿ' ಎನ್ನುವ ಪರಿಕಲ್ಪನೆಯು ದೇಶದ ಕಾನೂನಿನಲ್ಲಿ ಇನ್ನೂ ಅಡಕವಾಗಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಸಕ್ಷಮ ಪ್ರಾಧಿಕಾರ ಅನುಮತಿ ನೀಡಲು ವಿಳಂಬ ಮಾಡಿದಲ್ಲಿ, ಪರಿಭಾವಿತ ಅನುಮತಿಯ ಮೊರೆ ಹೋಗಬಹುದು ಎಂಬ ವಾದವನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಸ್.ಸಿ. ಶರ್ಮ ಅವರು ಇರುವ ವಿಭಾಗೀಯ ಪೀಠವು ತಿರಸ್ಕರಿಸಿದೆ.
'ಅಪರಾಧ ದಂಡಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 197ರಲ್ಲಿ ಪರಿಭಾವಿತ ಅನುಮತಿಯ ಪರಿಕಲ್ಪನೆ ಇಲ್ಲ' ಎಂದು ಪೀಠವು ಹೇಳಿದೆ.
ಎಫ್‌ಎಸ್‌ಎಸ್‌ಎಐ ನಿರ್ದೇಶಕಿ ಆಗಿದ್ದ ಸುನೀತಿ ತೊತೆಜಾ ಅವರ ವಿರುದ್ಧ ದಾಖಲಾಗಿದ್ದ ದೋಷಾರೋಪ ಪಟ್ಟಿ, ಸಮನ್ಸ್ ಆದೇಶ ಮತ್ತು ಇತರ ಕ್ರಮಗಳನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲ ಎಂಬ ಕಾರಣಕ್ಕೆ ಪೀಠವು ಫೆಬ್ರುವರಿ 25ರಂದು ರದ್ದುಪಡಿಸಿದೆ.
ವಿನೀತ್ ನಾರಾಯಣ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಆಧರಿಸಿ ಉತ್ತರ ಪ್ರದೇಶ ಸರ್ಕಾರವು, ಕಾನೂನಿನ ಕ್ರಮ ಕೈಗೊಳ್ಳಲು ಅನುಮತಿ ಕೋರಿದಾಗ ಸಕ್ಷಮ ಪ್ರಾಧಿಕಾರವು ತೊಂಬತ್ತು ದಿನಗಳ ಕಾಲಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಾದಿಸಿತ್ತು. ಸಕ್ಷಮ ಪ್ರಾಧಿಕಾರವು ಈ ಕಾಲಮಿತಿಯಲ್ಲಿ ತೀರ್ಮಾನ ಕೈಗೊಳ್ಳದೆ ಇದ್ದ ಕಾರಣದಿಂದಾಗಿ, 'ಪರಿಭಾವಿತ ಅನುಮತಿ'ಯ ಆಧಾರದಲ್ಲಿ ಕಾನೂನಿನ ಕ್ರಮಕ್ಕೆ ಮುಂದಾಗಿದ್ದುದು ಸರಿ ಎಂದು ಅದು ಹೇಳಿತ್ತು.
ದೂರುದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸುಬ್ರಮಣಿಯನ್ ಸ್ವಾಮಿ ಮತ್ತು ಮನಮೋಹನ ಸಿಂಗ್ ನಡುವಿನ ಪ್ರಕರಣವನ್ನು ಉಲ್ಲೇಖಿಸಿ, ಸಕ್ಷಮ ಪ್ರಾಧಿಕಾರವು ಯಾವುದೇ ತೀರ್ಮಾನವನ್ನು ವಿಸ್ತರಿತ ಅವಧಿಗೆ ಮುನ್ನ ತೆಗೆದುಕೊಳ್ಳದೆ ಇದ್ದಲ್ಲಿ, ಕಾನೂನಿನ ಕ್ರಮ ಕೈಗೊಳ್ಳುವ ಪ್ರಸ್ತಾವಕ್ಕೆ ಅನುಮತಿ ನೀಡಲಾಗಿದೆ ಎಂದು ಪರಿಭಾವಿಸಲಾಗುತ್ತದೆ ಎಂದು ವಾದಿಸಿದ್ದರು.
ವಿನೀತ್ ನಾರಾಯಣ್ ಪ್ರಕರಣವನ್ನು ಉಲ್ಲೇಖಿಸಿ ವಿಭಾಗೀಯ ಪೀಠವು, 'ಪ್ರಕರಣವು ಸಿಆರ್‌ಪಿಸಿಯ ಸೆಕ್ಷನ್ 197ರ ಬಗ್ಗೆ ಹೇಳಿಲ್ಲ. ಅದು ಸಿಬಿಐ ಹಾಗೂ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಇರುವ ತನಿಖಾ ಅಧಿಕಾರ ಮತ್ತು ಪ್ರಕ್ರಿಯೆಯ ಬಗ್ಗೆ ಹೇಳಿದೆ' ಎಂದು ಸ್ಪಷ್ಟಪಡಿಸಿದೆ.
'ಕಾನೂನಿನ ಕ್ರಮ ಜರುಗಿಸಲು ಅನುಮತಿ ನೀಡುವ ವಿಚಾರದಲ್ಲಿ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅದರಲ್ಲಿ ಹೇಳಲಾಗಿದೆ ಎಂಬುದು ನಿಜ. ಆದರೆ ಕಾಲಮಿತಿಯಲ್ಲಿ ಅನುಮತಿ ನೀಡದೆ ಇದ್ದಾಗ ಅದು ಪರಿಭಾವಿತ ಅನುಮತಿಯಾಗುತ್ತದೆ ಎಂದು ಹೇಳುವ ಮಾತುಗಳು ಇಲ್ಲ' ಎಂದು ಪೀಠವು ತಿಳಿಸಿದೆ.
ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲಿ ಪರಿಭಾವಿತ ಅನುಮತಿಯ ಬಗ್ಗೆ ಏನೂ ಇಲ್ಲ. ಆ ಪ್ರಕರಣದ ತೀರ್ಪು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕುರಿತಾಗಿ ಹಾಗೂ ಆ ಕಾಯ್ದೆಯ ಅಡಿಯಲ್ಲಿ ಕ್ರಮ ಜರುಗಿಸಲು ಅನುಮತಿ ಪಡೆಯುವುದರ ಕುರಿತಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಅವರು ಪ್ರತ್ಯೇಕವಾಗಿ ನೀಡಿದ ತೀರ್ಪಿನಲ್ಲಿ, ಸಂಸತ್ತಿನ ಪರಿಗಣನೆಗಾಗಿ ಕೆಲವು ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದರು. ಅವುಗಳಲ್ಲಿ ಒಂದು, ವಿಸ್ತರಿತ ಕಾಲಮಿತಿಯ ಕೊನೆಯಲ್ಲಿಯೂ ಸಕ್ಷಮ ಪ್ರಾಧಿಕಾರವು ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಇದ್ದರೆ, ಕ್ರಮ ಜರುಗಿಸಲು ಅನುಮತಿ ಸಿಕ್ಕಿದೆ ಎಂದು ಪರಿಭಾವಿಸುವುದರ ಬಗ್ಗೆ ಇದೆ. ಕ್ರಮ ಜರುಗಿಸುವ ಏಜೆನ್ಸಿ ಅಥವಾ ದೂರುದಾರರು ದೋಷಾರೋಪ ಪಟ್ಟಿ ಸಲ್ಲಿಕೆಗೆ ಅಥವಾ ದೂರು ದಾಖಲಿಸಲು ಕಾಲಮಿತಿ ಮುಗಿದ ಹದಿನೈದು ದಿನಗಳೊಳಗೆ ಮುಂದಾಗಬಹುದು ಎಂಬ ವಿಚಾರವನ್ನು ಪೀಠವು ನೆನಪಿಸಿದೆ.
'ಆದರೆ, ಪ್ರಸ್ತಾಪವನ್ನು ಸಂಸತ್ತು ಶಾಸನದಲ್ಲಿ ಅಳವಡಿಸಿಲ್ಲ. ಹೀಗಿರುವಾಗ, ಅಸ್ತಿತ್ವದಲ್ಲೇ ಇಲ್ಲದ ಇಂಥದ್ದೊಂದು (ಪರಿಭಾವಿತ ಅನುಮತಿ) ಇದೆ ಎಂದು ಹೇಳಲು ಈ ಕೋರ್ಟ್‌ನಿಂದ ಸಾಧ್ಯವಿಲ್ಲ' ಎಂದು ಪೀಠವು ಸ್ಪಷ್ಟಪಡಿಸಿದೆ.




.jpg)

