ಲಖನೌ: ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ವಾರಾಂತ್ಯದ ದಿನಗಳಲ್ಲಿ ಅಸಂಖ್ಯಾತ ಭಕ್ತರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದತ್ತ ಧಾವಿಸಿದರು.
ಮಹಾಕುಂಭಮೇಳ ನಗರದ ಸುತ್ತಮುತ್ತಲೂ ಜನದಟ್ಟಣೆ ಹೆಚ್ಚಿದ್ದು, ರಸ್ತೆಗಳಲ್ಲಿ ಸಂಚಾರದಟ್ಟಣೆಯೂ ಅಧಿಕವಾಗಿದೆ. ಇದರ ಪರಿಣಾಮ ಅಪಾರ ಸಂಖ್ಯೆಯ ಭಕ್ತರು ರಸ್ತೆಗಳಲ್ಲೇ ಸಿಲುಕಿಕೊಂಡಿದ್ದು, ತಾಸುಗಟ್ಟಲೇ ಕುಡಿಯುವ ನೀರು ಸಹ ಸಿಗದೆ ಪರಿತಪಿಸಿದರು.
ಜನದಟ್ಟಣೆ- ವಾಹನದಟ್ಟಣೆಯಿಂದ ರಸ್ತೆಗಳಲ್ಲಿ ಸಿಲುಕಿರುವ ಭಕ್ತರಿಗೆ ಸರ್ಕಾರ ಹಾಗೂ ಅಧಿಕಾರಿ ವರ್ಗವು ಕುಡಿಯುವ ನೀರು, ಆಹಾರದ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕು ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಆಗ್ರಹಿಸಿದ್ದಾರೆ.
ಮಧ್ಯಪ್ರದೇಶ, ಲಖನೌ, ವಾರಾಣಸಿ ಸೇರಿದಂತೆ ಇತರ ಸ್ಥಳಗಳಿಂದ ತ್ರಿವೇಣಿ ಸಂಗಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಭಕ್ತರ ವಾಹನಗಳಿಂದ ತುಂಬಿವೆ. ಸಂಗಮದತ್ತ ನಡೆದು ಹೋಗಲು ಪ್ರಯಾಸಪಡಬೇಕಿದೆ.
ರಸ್ತೆಯಲ್ಲೇ ಎಂಟು ತಾಸು ಕಾಯಬೇಕಾಗಿದ್ದರಿಂದ ಅಸಮಾಧಾನಗೊಂಡ ಕೆಲವು ಭಕ್ತರು, ಹಲವು ಕಡೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ತಮ್ಮ ವಾಹನಗಳು ಮುಂದೆ ಚಲಿಸಲು ಬ್ಯಾರಿಕೇಡ್ ತೆರವುಗೊಳಿಸಿ ಎಂದು ಒತ್ತಾಯಿಸಿದರು.
'ಆರು ಕಿ.ಮೀ. ದೂರ ಕ್ರಮಿಸಲು ಆರು ತಾಸು ಬೇಕಾಯಿತು' ಎಂದು ಭಕ್ತರಾದ ಅನಾಮಿಕ ತಿವಾರಿ ತಿಳಿಸಿದರು.
ಮಹಾಕುಂಭಕ್ಕೆ ತೆರಳಬೇಕಿದ್ದ ಪ್ರಯಾಣಿಕರಿಗೆ ವಾರಾಣಸಿ, ಹರ್ದೋಯಿ ಸೇರಿದಂತೆ ಇತರ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಬೋಗಿಗಳಿಗೆ ಹತ್ತಲು ಅವಕಾಶವೇ ಸಿಗಲಿಲ್ಲ. ಜನರಿಂದ ತುಂಬಿದ್ದ ರೈಲಿನ ಬಹುತೇಕ ಬೋಗಿಗಳ ಬಾಗಿಲನ್ನು ಒಳಗಿನಿಂದಲೇ ಹಾಕಲಾಗಿತ್ತು.
ವಾರಾಣಸಿ ರೈಲ್ವೆ ನಿಲ್ದಾಣದಲ್ಲಿ ಬೋಗಿಗಳಿಗೆ ಹತ್ತಲು ಸಾಧ್ಯವಾಗದ ಹಲವು ಮಹಿಳೆಯರು ರೈಲಿನ ಎಂಜಿನ್‌ಗೆ ನುಗ್ಗಿದರು. ಪೊಲೀಸರು ಮಧ್ಯಪ್ರವೇಶಿಸಿ ಹೊರ ಕಳಿಸಬೇಕಾಯಿತು.
ಹರ್ದೋಯಿಯಲ್ಲಿ ಬೋಗಿಗಳಿಗೆ ಹತ್ತಲು ಸಾಧ್ಯವಾಗದ ಕೆಲವರು ಹಾನಿಗೆ ಯತ್ನಿಸಿದರು.






