ಶ್ರೀನಗರ: ದೆಹಲಿ ವಿಧಾನಸಭಾ ಚುನಾವಣೆಗೂ ಮೊದಲು ಎಎಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿತ್ತಾದರೂ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರೀಕ್ ಹಮೀದ್ ಕರ್ ಹೇಳಿದರು.
ಮೈತ್ರಿಗೆ ಕಾಂಗ್ರೆಸ್ ಯಾವತ್ತೂ ಸಿದ್ಧವಿತ್ತು. ಆದರೆ ಮೈತ್ರಿಯ ಭಾಗವಾಗಲು ಕೇಜ್ರಿವಾಲ್ ಒಪ್ಪಲಿಲ್ಲ' ಎಂದು ಅವರು ಹೇಳಿದರು. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ನೋವುಂಟುಮಾಡುವಂತೆ ಇದೆಯಾದರೂ, ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಯಾವುದೇ ಮೈತ್ರಿಕೂಟವು ಪರಿಪೂರ್ಣವಾಗದು ಎಂಬುದನ್ನು ಫಲಿತಾಂಶವು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
'ಕಾಂಗ್ರೆಸ್ ಪಕ್ಷ ಇಲ್ಲದೆ ನೀವು ಏನೂ ಮಾಡಲಾಗದು ಎಂಬ ಸಂದೇಶವನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಈ ಫಲಿತಾಂಶವು ರವಾನಿಸಿದೆ' ಎಂದರು. ಈ ಸಂದೇಶವು ಮೈತ್ರಿಕೂಟದ ಎಲ್ಲ ಪಕ್ಷಗಳನ್ನೂ ತಲುಪಲಿ ಎಂಬುದು ತಮ್ಮ ಆಶಯ ಎಂದು ಹೇಳಿದರು.
ದೆಹಲಿ ಫಲಿತಾಂಶವು ಕೇಜ್ರಿವಾಲ್ ಅವರಿಗೆ, ಅವರ ಅಹಂಕಾರಕ್ಕೆ, ಕಾಂಗ್ರೆಸ್ ನೆರವಿಲ್ಲದೆಯೂ ತಾನು ಪವಾಡ ಮಾಡಬಲ್ಲೆ ಎಂದು ಭಾವಿಸಿದ್ದಕ್ಕೆ ಆಗಿರುವ ಸೋಲು ಎಂದು ವ್ಯಾಖ್ಯಾನಿಸಿದರು.




