ಕಾಸರಗೋಡು: ಕೇರಳದಲ್ಲಿ ಅರ್ಧ ಬೆಲೆಗೆ ದ್ವಿಚಕ್ರ ವಾಹನ ಪೂರೈಕೆ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಎನ್‍ಸಿಪಿ(ಅಜಿತ್ಪವಾರ್ ಬಣ) ಕೇರಳ ರಾಜ್ಯಾಧ್ಯಕ್ಷ ಎನ್.ಎ.ಮುಹಮ್ಮದ್ ಕುಟ್ಟಿ ಆಗ್ರಹಿಸಿದ್ದಾರೆ.
ಅವರು ಕಾಸರಗೋಡಿನಲ್ಲಿ ಎನ್‍ಸಿಪಿ ರಾಜ್ಯ ಸಮಿತಿ ನೇತೃತ್ವದಲ್ಲಿ ಆಯೋಜಿಸಿದ್ದ ರಾಜಕೀಯ ಸ್ಪಷ್ಟೀಕರಣ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಅರ್ಧ ಬೆಲೆಗೆ ಸ್ಕೂಟರ್ ಸೇರಿದಂತೆ ವಿವಿಧ ಸಾಮಗ್ರಿ ಪೂರೈಸುವ ಹಗರಣದಲ್ಲಿ ಅನೇಕ ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಮುಖಂಡರು ಶಾಮೀಲಾಗಿದ್ದು, ದಿನವೊಂದಕ್ಕೆ ಹಲವು ಕೇಸುಗಳು ದಾಖಲಾಗುತ್ತಿದೆ. ರಜಕೀಯ ಮುಖಂಡರಿಗೆ ದೇಣಿಗೆ ನೀಡಲಾಗಿದ್ದು, ಈ ಬಗ್ಗೆ ಆಡಳಿತ ಪಕ್ಷದಲ್ಲಿರುವವರ ಪಾತ್ರದ ಬಗ್ಗೆಯೂ ನ್ಯಾಯಯುತ ತನಿಖೆ ನಡೆಯಬೇಕು.
ಕೇರಳದಲ್ಲಿ ಆಮೂಲಾಗ್ರ ಬದಲಾವಣೆ ತಂದುಕೊಳ್ಳಲು ಹಾಗೂ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ರಂಗ ರಚಿಸುವ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಆಯೋಜಿಸಲಾಗುವುದು ಎಂದು ತಿಳಿಸಿದರು.
ಎನ್‍ಸಿಪಿ ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಎ.ಜಬ್ಬಾರ್ ಅವರು ಜಾಥಾ ಮುಖಂಡಗೆ ಧ್ವಜ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯಾತ್ರಾ ಸಂಯೋಜಕ ಶಾಜಿ ತೆಂಗುಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಲ್ಲಾರ ಮೋಹನ್ ದಾಸ್, ವಕೀಲ ಸೈಫುದ್ದೀನ್, ಕೆ.ಕೆ.ಶಂಶುದ್ದೀನ್, ಪಾರ್ಥಸಾರಥಿ ಮಾಸ್ತರ್, ಸಾಬು ಮತ್ತಾಯಿ, ಜೆ.ಬಿ.ಪ್ರಕಾಶ್, ನಾದಿರ್ ಶಾ ಮೊದಲಾದವರು ಉಪಸ್ಥಿರಿದ್ದರು.
ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುವ ಯಾತ್ರೆ ಫೆ. 17ರಂದು ತಿರುವನಂತಪುರದಲ್ಲಿ ಸಂಪನ್ನಗೊಳ್ಳಲಿದೆ. ಫೆಬ್ರವರಿ 22 ರಂದು ಮಧ್ಯಾಹ್ನ 3 ಗಂಟೆಗೆ ಎರ್ನಾಕುಲಂನ ರಾಜೇಂದ್ರ ಮೈದಾನದಲ್ಲಿ ಎನ್‍ಸಿಪಿಯ ಪೂರ್ಣ ರಾಜ್ಯ ಸಮ್ಮೇಳನ ನಡೆಯಲಿದೆ. ಎನ್‍ಸಿಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಬ್ರಿಜ್‍ಮೋಹನ್ ಶ್ರೀವಾಸ್ತವ ಮತ್ತಿತರರು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.


