ಪತ್ತನಂತಿಟ್ಟ: ದೇವಸ್ವಂ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಶಬರಿಮಲೆಗೆ ಕೋಟ್ಯಂತರ ಕೇಂದ್ರ ನಿಧಿ ನಷ್ಟವಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಶಬರಿಮಲೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ 100 ಕೋಟಿ ರೂಪಾಯಿಗಳಲ್ಲಿ ದೇವಸ್ವಂ ಮಂಡಳಿ ಕೇವಲ 55 ಕೋಟಿ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿದೆ ಎಂದು ತಿಳಿಸಿರುವರು.
ಬುಧವಾರ ಶಬರಿಮಲೆಗೆ ಭೇಟಿ ನೀಡಿದ ನಂತರ ಅವರು ಮಾತನಾಡುತ್ತಿದ್ದರು.
ದೇವಸ್ವಂ ಮಂಡಳಿಯು ಪ್ರತಿಯೊಂದು ಯೋಜನೆಗೂ ವಿವರವಾದ ಯೋಜನಾ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ರಾಜ್ಯದ ದೇವಸ್ವಂ ಈ ವರದಿ ನೀಡದ ಕಾರಣ, ಮುಂದುವರಿದ ಕಾರ್ಯಾಚರಣೆಗಳಿಗೆ ಹಣವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಶೇಖಾವತ್ ಹೇಳಿದರು. ವಿವರವಾದ ಯೋಜನೆಯನ್ನು ಸಲ್ಲಿಸಿದರೆ ಪ್ರಸಾದ ಯೋಜನೆಯಡಿ ಶಬರಿಮಲೆಯ ಅಭಿವೃದ್ಧಿಗೆ ಹಣವನ್ನು ಒದಗಿಸಬಹುದು ಎಂದು ಸಚಿವರು ಹೇಳಿದರು.
ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬುಧವಾರ ಶಬರಿಮಲೆಗೆ ಭೇಟಿ ನೀಡಿದ್ದರು. ಅವರ ಪತ್ನಿ ನೋನಂದ್ ಕನ್ವರ್ ಜೊತೆ, ಇರುಮುಡಿ ಪ್ರತ್ಯೇಕವಾಗಿ ಕಟ್ಟಿ ಹದಿನೆಂಟನೇ ಮೆಟ್ಟಿಲು ಹತ್ತಿದರು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತು ಇತರ ನಾಯಕರು ಜೊತೆಗಿದ್ದರು.





