ಕಾಸರಗೋಡು: ಆನ್‍ಲೈನ್ ಟ್ರೇಡಿಂಗ್ ಮೂಲಕ ವೈದ್ಯರೊಬ್ಬರಿಂದ ಭರೋಬ್ಬರಿ 2.23ಕೋಟಿ ರೂ. ಎಗರಿಸಿದ ಪ್ರಕರಣದ ಆರೋಪಿ, ರಾಜಸ್ಥಾನ ಜೋಧ್‍ಪುರ್ ನಿವಾಸಿ ಸುನಿಲ್‍ಕುಮಾರ್ ಜಾನ್ವರ್(24)ಎಂಬಾತನನ್ನು ಕಾಸರಗೋಡು ಸೈಬರ್ ಸೆಲ್ ಪೊಲೀಸರು ಬಂಧಿಸಿದ್ದಾರೆ.
ವರ್ಕ್ ಫ್ರಮ್ ಹೋಮ್ ಉದ್ಯೋಗದ ಜತೆಗೆ ಆನ್‍ಲೈನ್ ವ್ಯಾಪಾರದ ಭರವಸೆಯೊಂದಿಗೆ ಕಾಸರಗೋಡಿನ ವೈದ್ಯರೊಬ್ಬರಿಂದ ಈ ಹಣ ಲಪಟಾಯಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕ್ರೈಂ ಬ್ರಾಂಚ್ ಜವಾಬ್ದಾರಿ ಹೊಂದಿರುವ ಎಂ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ರಾಜಸ್ಥಾನದಿಂದ ಅಲ್ಲಿನ ಶಾಸ್ತ್ರಿನಗರ ಠಾಣೆ ಪೊಲೀಸರ ಸಹಾಯದಿಂದ ಬಂಧಿಸಿ ಕರೆ ತಂದಿದ್ದಾರೆ. ಕಾಸರಗೊಡಿನ ಸೈಬರ್ ಪೊಲೀಸರ ತಂಡ ಐದು ದಿವಸಗಳ ಹಿಂದೆ ರಾಜಸ್ಥಾನ ತೆರಳಿದ್ದು, ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿತ್ತು. ಆರೋಪಿ ಬ್ಯಾಂಕ್ ಖಾತೆಗೆ ನೀಡಿದ್ದ ವಿಳಾಸ ಕೇಂದ್ರೀಕರಿಸಿ ಆರೋಪಿ ಪತ್ತೆಗೆ ಶೋಧ ಆರಂಭಿಸಿದ್ದರು. ಅಸೌಖ್ಯದಿಂದ ಹಿನ್ನೆಲೆಯಲ್ಲಿ ರಾಜಸ್ಥಾನದ ಜೋಧ್‍ಪುರ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯನ್ನು ನೋಡಲು ಆಗಮಿಸಿದ್ದ ಸಂದರ್ಭ ಸುನಿಲ್‍ಕುಮಾರ್‍ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿ ಸಂಬಂಧಿಕರು ತಡೆಯೊಡ್ಡಿದ್ದು, ಅಲ್ಲಿನ ಪೊಲೀಸರ ಸಹಾಯದಿಂದ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಕಾಸರಗೋಡಿನ ಪೊಲೀಸರು ಯಶಸ್ವಿಯಾಗಿದ್ದರು. ವಂಚನಾ ಜಾಲದಲ್ಲಿ ಹಲವರು ಶಾಮೀಲಾಗಿದ್ದು, ಇವರ ಪತ್ತೆಕಾರ್ಯ ಮುಂದುವರಿಸಲಾಗಿದೆ.




