ಮಂಜೇಶ್ವರ : ಮಂಜೇಶ್ವರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ 25ಗ್ರಾಂ ಎಂಡಿಎಂಎ, 7ಲಕ್ಷ ರೂ. ನಗದು ಹಾಗೂ ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕುಂಜತ್ತೂರು ಉದ್ಯಾವರ ಮಾಡ ನಿವಾಸಿಗಳಾದ ಅಲ್ಲಾಂ ಇಕ್ಬಾಲ್, ನ್ವರ್ ಆಳಿಕುಟ್ಟಿ, ಉಪ್ಪಳಶಾರದಾನಗರ ನಿವಾಸಿ ಮಹಮ್ಮದ್ ಫಿರೋಸ್ ಹಾಗೂ ಬನತ್ತಂಗಾಡಿ ನಿವಾಸಿ ಮಹಮ್ಮದ್ ಮನ್ಸೂರ್ ಬಂಧಿತರು.
ಬಂಧಿತರಲ್ಲಿ ಮಹಮ್ಮದ್ ಮನ್ಸೂರ್ ಕರ್ನಾಟಕ ಕೇಂದ್ರೀಕರಿಸಿ ನಡೆಯುತ್ತಿರುವ ಮಾದಕ ದ್ರವ್ಯ ಮಾಫಿಯಾದ ಪ್ರಧಾನ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರ ಮೇಲ್ನೋಟದಲ್ಲಿ ಡಿವೈಎಸ್‍ಪಿ ಸಿ.ಕೆ ಸುನಿಲ್‍ಕುಮಾರ್ ನೇತೃತ್ವದ ಪೊಲೀಸರ ನಿರ್ದೇಶ ಪ್ರಕಾರ ಮಂಜೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕೇರಳ, ಕರ್ನಾಟಕ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಮಾದಕ ದ್ರವ್ಯ ಮಾಫಿಯಾಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ವ್ಯಕ್ತವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.




